ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿ ಮಾಲೀಕರಿಂದ 14 ಲಕ್ಷ ರೂ. ಲಂಚ ಪಡೆಯುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಏ.8ರವರೆಗೆ ಸಿಬಿಐ ವಿಶೇಷ ಕೋರ್ಟ್ ಗುರುವಾರ ಸಿಬಿಐ ವಶಕ್ಕೆ ನೀಡಿದೆ.
ಆದಾಯ ಇಲಾಖೆಯ ಎಚ್.ಆರ್.ನಾಗೇಶ್ ಹಾಗೂ ನರೇಂದರ್ ಸಿಂಗ್ ಸೇರಿದಂತೆ ಇಬ್ಬರನ್ನು ಸಿಬಿಐ ನಿನ್ನೆ ರಾತ್ರಿ ಬಂಧಿಸಿತ್ತು. ಇಂದು ಅಧಿಕಾರಿಗಳಿ ಸಿಬಿಐ ವಿಶೇಷ ಕೋರ್ಟ್ ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಮಾಡಿಕೊಂಡಿತ್ತು.
ಜಯನಗರದ ಖಾಸಗಿ ಹೋಟೆಲ್ ವೊಂದರಲ್ಲಿ ದೂರುದಾರ ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದ ವೇಳೆಯೇ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿತ್ತು. ಸಿಬಿಐ ಅಧಿಕಾರಿಗಳು ಇಬ್ಬರು ಐಟಿ ಅಧಿಕಾರಿಗಳ ಮನೆಯಲ್ಲಿ ತಪಾಸಣೆ ನಡೆಸಿದ ವೇಳೆ 1.35 ಕೋಟಿ ರೂಪಾಯಿ ಹಣ, ಮಹತ್ವದ ದಾಖಲೆ ಪತ್ರಗಳು ಸಿಕ್ಕಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿದ್ದವು.
15 ಲಕ್ಷಕ್ಕೆ ಬೇಡಿಕೆ; 14ಕ್ಕೆ ಡೀಲ್! : ಮಾರ್ಚ್ 6ಂದು ಬಸವನಗುಡಿಯ ರಿಯಲ್ ಎಸ್ಟೇಟ್ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ರಾವ್ ಅವರ ಕಚೇರಿ ಮೇಲೆ ಆರೋಪಿಗಳಾಗಿರುವ ಐಟಿ ಅಧಿಕಾರಿಗಳನ್ನೊಳಗೊಂಡ ತಂಡ ಶೋಧ ಕಾರ್ಯಾಚರಣೆ ನಡೆಸಿ 25 ಲಕ್ಷ ಹಾಗೂ 15 ಲಕ್ಷ ರೂ. ಹಣಕಾಸು ವಹಿವಾಟಿನ ಎರಡು ರಸೀದಿ, ಬಸವನಗುಡಿಯ ಸರ್ವೋತ್ತಮ ರಾಜು ಎಂಬುವವರು ನೀಡಿದ್ದ 10 ಚೆಕ್‌ಗಳನ್ನು ಜಪ್ತಿ ಮಾಡಿಕೊಂಡಿದ್ದರು. ಈ ಕುರಿತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣ ಕಟ್ಟಡದಲ್ಲಿರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟು ಹೋಗಿದ್ದರು ಎನ್ನಲಾಗಿದೆ.
ಬಳಿಕ ವಿಚಾರಣೆ ವೇಳೆ ಕಂಪನಿ ನಡೆಸಿದ್ದ 1.51 ಕೋಟಿ ರೂ ಹಾಗೂ 1. 57 ಕೋಟಿ ರೂ. ವಹಿವಾಟಿಗೆ ಸಂಬಂಧಿಸಿದ ಮುಂಗಡ ತೆರಿಗೆ 10 ರಿಂದ 15 ಲಕ್ಷ ರೂ. ಪಾವತಿಸುವಂತೆ ಸೂಚಿಸಿದ್ದರು. ಇದಾದ ಬಳಿಕ ಶ್ರೀನಿವಾಸರಾವ್ 10 ಲಕ್ಷ ರೂ. ಮುಂಗಡ ತೆರಿಗೆ ಪಾವತಿ ಬಗ್ಗೆ ಕಚೇರಿಗೆ ತೆರಳಿ ರಸೀದಿ ಸಲ್ಲಿಸಿದ್ದರು.
ಈ ಬೆಳವಣಿಗೆಗಳ ಮಧ್ಯೆಯೇ ದೂರುದಾರ ಶ್ರೀನಿವಾಸ್ ರಾವ್, ಮಾತುಕತೆ ಮೂಲಕ ಪ್ರಕರಣ ಇತ್ಯರ್ಥಪಡಿಸಲು 7.5 ಲಕ್ಷ ರೂ. ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಆದರೆ, ಇದನ್ನು ನಿರಾಕರಿಸಿದ್ದ ಈ ಇಬ್ಬರು ಅಧಿಕಾರಿಗಳು, ನೀವು ಹಣ ಕೊಡಿ, ಸರ್ವೋತ್ತಮ ರಾಜು ಅವರ ಬಳಿಯಿಂದ ಹಣ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ. ಇದಾದ ಬಳಿಕ ಎರಡು ಕೇಸ್ ಇತ್ಯರ್ಥಪಡಿಸಲು 15 ಲಕ್ಷ ರೂ. ಬೇಡಿಕೆ ಇಟ್ಟಿದ್ದು, ಕೊನೆಗೆ 14 ಲಕ್ಷ ರೂ. ಪಡೆಯಲು ಒಪ್ಪಿದ್ದರು ಎಂದು ಶ್ರೀನಿವಾಸ್ ರಾವ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
Comments are closed.