ಶಿರಸಿ: ಉತ್ತರ ಕನ್ನಡ ಜಿಲ್ಲೆ ಇದೀಗ ಬಿಜೆಪಿ ಭದ್ರಕೋಟೆ. ಕಳೆದ ವಿಧಾನಸಭೆ ಚುನಾವಣೆಯ ಎಂಟು ಕ್ಷೇತ್ರದಲ್ಲಿ ಬಿಜೆಪಿ ಆರು ಕ್ಷೇತ್ರವನ್ನ ತನ್ನ ತೆಕ್ಕೆಗೆ ತೆಗೆದುಕೊಂಡ್ರೆ, ಕಾಂಗ್ರೆಸ್ ಎರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಇನ್ನು ಜೆಡಿಎಸ್ ಮಾತ್ರ ಜಿಲ್ಲೆಯಲ್ಲಿ ಸಂಪೂರ್ಣ ನೆಲ ಕಚ್ಚಿತ್ತು. ಆದರೆ ಇದೀಗ ಜಿಲ್ಲೆಯ ಲೋಕಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯನ್ನ ರಾಜ್ಯ ಮೈತ್ರಿ ಸರ್ಕಾರ ಕಣಕ್ಕಿಳಿಸಿದೆ.
ಜಿಲ್ಲೆಯಲ್ಲಿ ಅಸ್ತಿತ್ವ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ನೀಡಿರೋದು ಕೆಲ ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿದೆ. ಇನ್ನು, ಜಿಲ್ಲಾ ಮಂತ್ರಿ ಹಾಗೂ ಕಂದಾಯ ಸಚಿವ ಆರ್.ವಿ. ದೇಶಪಾಂಡೆಗೂ ಕೂಡ ಸಹಿಸೋ ಸಂಗತಿ ಏನಲ್ಲ. ಅದನ್ನ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಅವರನ್ನ ಬೆಳೆಸಿದ್ದು ನಾನೇ. ಆದರೆ ಅವರಿಗೆ ನೆನಪಿದ್ಯಾ ಅಂತ ಕೇಳಿ ಅಂತ ಟಾಂಗ್ ನೀಡಿದ್ದು, ಸಚಿವ ದೇಶಪಾಂಡೆ ನಡೆ ಬಗ್ಗೆ ಅನುಮಾನ ಹುಟ್ಟಿಸಿದೆ.
ಮನದಲ್ಲಿ ನೋವಿದ್ದರೂ ಮೈತ್ರಿ ಅಭ್ಯರ್ಥಿ ಗೆಲುವಿಗೆ ಒಲ್ಲದ ಮನಸ್ಸಿನಿಂದ ದೇಶಪಾಂಡೆ ಹೆಗಲು ಕೊಟ್ಟು ಪ್ರಚಾರ ಮಾಡಲು ಮುಂದಾಗಿದ್ದಾರೆ. ಇವರಿಗೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕೂಡ ಜೊತೆಯಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಹೀಗಾಗಿ ದೇಶಪಾಂಡೆ ನೇತೃತ್ವದಲ್ಲೇ ಪ್ರಚಾರ ಮಾಡ್ತಿವಿ ಅಂತಿದಾರೆ. ಇದಕ್ಕೆ ದೇಶಪಾಂಡೆ, ಇಲ್ಲ ಎನ್ನುವಂತೆ ತಲೆ ಅಲ್ಲಾಡಿಸಿ ಸುಮ್ಮನಾಗಿದ್ದು, ಜೋಡೆತ್ತಿನ ಹೋರಾಟ ಹೇಗೆ ಸಾಗಲಿದೆ ಅನ್ನೋ ಕುತುಹಲವನ್ನೂ ಮೂಡಿಸಿದೆ.
ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗದಂತೆ ನೋಡಿಕೊಳ್ತೇನೆ ಅನ್ನೋ ಭರವಸೆ ನೀಡಿದ ಹೊರಟ್ಟಿ ಹಾಗೂ ದೇಶಪಾಂಡೆ ಇಬ್ಬರೂ ಕೂಡ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಶಿಷ್ಯರೇ. ಅಂದು ಒಂದೇ ಪಕ್ಷದಲ್ಲಿ ಇದ್ದ ರಾಜಕೀಯ ಜೊತೆಗಾರರು. ಇದೀಗ ದೇಶಪಾಂಡೆ ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿ ಹೊತ್ತರೆ, ಹೊರಟ್ಟಿ ಅವರು ಜೆಡಿಎಸ್ ಪಕ್ಷದ ಜವಾಬ್ದಾರಿ ಹೊತ್ತಿದ್ದಾರೆ. ಇಂಥ ಘಳಿಗೆಯಲ್ಲೇ ಹೊರಟ್ಟಿ ಜೊತೆ ದೇಶಪಾಂಡೆ ಹೇಗೆ ಹೆಜ್ಜೆ ಹಾಕ್ತಾರೆ ಅನ್ನುವ ಕೂತುಹಲ ಕಾರ್ಯಕರ್ತರದ್ದಾಗಿದೆ.
ಅದೇನೇ ಇರಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಕೆಲವು ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಮಾಡಿರೋದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲೂ ಕೂಡ ಕಾಂಗ್ರೆಸ್ಸಿಗರನ್ನ ಕೆರಳಿಸಿದೆ.
ಒಟ್ಟಿನಲ್ಲಿ ಮಂಡ್ಯದಲ್ಲಿ ಸದ್ದು ಮಾಡಿದ ಜೋಡೆತ್ತಿನ ಹವಾ ಉತ್ತರ ಕನ್ನಡದಲ್ಲೂ ಸದ್ದು ಮಾಡಿದ್ದು, ಸಚಿವ ಆರ್ ವಿ ದೇಶಪಾಂಡೆ ಮತ್ತುಎಂಎಲ್ಸಿ ಬಸವರಾಜ್ ಹೊರಟ್ಟಿ ಜಿಲ್ಲೆಯ ಜೋಡೆತ್ತಾಗಿ ಹೊರ ಹೊಮ್ಮಿದ್ದಾರೆ.
Comments are closed.