ಕರ್ನಾಟಕ

ಮತ್ತೊಂದು ಗ್ರಾಮದಲ್ಲಿ ಶೋಭಾ ಕರಂದ್ಲಾಜೆಗೆ ಘೇರಾವ್

Pinterest LinkedIn Tumblr


ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಹೋದಲೆಲ್ಲಾ ಗ್ರಾಮಸ್ಥರು ಘೇರಾವ್​ ಹಾಕುತ್ತಿದ್ದಾರೆ. ನೆನ್ನೆ ಕಡೂರಿನ ಬಿದರೆ ಗ್ರಾಮದಲ್ಲಿ ಘೇರಾವ್​ ಹಾಕಿದ ಬೆನ್ನಲ್ಲೆ ಇಂದು ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮಸ್ಥರು ಸಂಸದರಿಗೆ ಘೇರಾವ್​ ಹಾಕಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ಪ್ರಚಾರಕ್ಕಾಗಿ ಬೆಂಬಲಿಗರೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ ಆಗಮಿಸಿದರು. ಆಗ ಗ್ರಾಮಸ್ಥರು, ನೀರು ಕೊಟ್ಟು ಗ್ರಾಮಕ್ಕೆ ಕಾಲಿಡಿ ಎಂದು ತರಾಟೆಗೆ ತೆಗೆದುಕೊಂಡರು.

“ಇಷ್ಟು ದಿನ ಎಲ್ಲಿದ್ರಿ ಶೋಭಾ, ಮತ ಕೇಳಲು ನಿಮಗೆ ಯಾವ ನೈತಿಕತೆ ಇದೆ. ನೀರು ಕೊಡದಿದ್ದರೆ ಯಾರಿಗೂ ವೋಟ್ ಹಾಕಲ್ಲ,” ಎಂದು ಗ್ರಾಮಸ್ಥರು ಗರಂ ಆಗಿ ಶೋಭಾ ಕರಂದ್ಲಾಜೆ ಅವರಿಗೆ ಹೇಳಿದರು. ಈ ವೇಳೆ ಗ್ರಾಮಸ್ಥರು ಹಾಗೂ ಬಿಜೆಪಿ ಮುಖಂಡರೊಂದಿಗೆ ವಾಗ್ವಾದ ಕೂಡ ನಡೆಯಿತು. ಜೊತೆಯಲ್ಲಿದ್ದ ಜಿಲ್ಲಾ ಪಂಚಾಯಿತಿ ಬಿಜೆಪಿ ಮಾಜಿ ಸದಸ್ಯ ಕಲ್ಮರುಡಪ್ಪಗೆ ತರಾಟೆಗೆ ತೆಗೆದುಕೊಂಡರು.

ಗ್ರಾಮಸ್ಥರು ಏರು ಧ್ವನಿಯಲ್ಲಿ ನೀರು ಕೇಳುವಾಗ ಕಾರಿನಿಂದ ಕೆಳಗೆ ಇಳಿಯದ ಶೋಭಾ ಕರಂದ್ಲಾಜೆ, ಮುಜುಗರ ತಪ್ಪಿಸಿಕೊಳ್ಳಲು ಸ್ಥಳದಿಂದ ಕಾಲ್ಕಿತ್ತರು.

Comments are closed.