ಬೆಂಗಳೂರು: ಪ್ರಸಕ್ತ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಬದಲಾಗಿ ಹೊಸಬರಿಗೆ ಅವಕಾಶ ದೊರೆಯಬಹುದು ಎಂಬ ಸುಳಿವನ್ನು ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ನೀಡಿದ್ದಾರೆ.
ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಚುನಾವಣೆ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷರಿಂದ ಹಿಡಿದು ಪಂಚಾಯತ್‌ಗಳ ತನಕ ದೇಶಾದ್ಯಂತ ಪಕ್ಷದ ಪುನರ್ರಚನೆ ಕಾರ್ಯ ನಡೆಯಲಿದೆ. ಕರ್ನಾಟಕದಲ್ಲೂ ಕೂಡಾ ಬದಲಾವಣೆಯ ಪರ್ವ ಆರಂಭವಾಗಲಿದೆ ಎಂದರು.
ಒಂದು ವೇಳೆ ತಮಗೆ ಅಧ್ಯಕ್ಷ ಸ್ಥಾನ ಸಿಕ್ಕರೆ? ಎಂಬ ಪ್ರಶ್ನೆಗೆ, ಅವಕಾಶ ಸಿಕ್ಕರೆ ನಿಶ್ಚಿತವಾಗಿಯೂ ಎಂತಹ ಜವಾಬ್ದಾರಿಯನ್ನಾದರೂ ನಿರ್ವಹಿಸುತ್ತೇನೆ. ಹಾಗೆಂದು ತಾವೇನು ಸನ್ಯಾಸಿಯಲ್ಲ. ವಾಸ್ತವವಾಗಿ ಈ ಪ್ರಕ್ರಿಯೆ ಕಳೆದ ಡಿಸೆಂಬರ್ ನಲ್ಲೇ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಇದು ಮುಂದಕ್ಕೆ ಹೋಯಿತು ಎಂದರು.
ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರನ್ನು ನಿರ್ಲಕ್ಷಿಸಿ ಇದೀಗ ಹೆಲಿಕಾಪ್ಟರ್‌ನಲ್ಲಿ ಬಂದವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಕೊಟ್ಟಿರುವ ಕುರಿತು ಪ್ರಸ್ತಾಪಿಸಿದಾಗ, ಬಿಜೆಪಿ ಯುವಕರನ್ನು ಬೆಳೆಸಲು ಮುಂದಾಗಿದೆ. ನಳೀನ್ ಕುಮಾರ್ ಕಟೀಲು ಈ ಪ್ರಯೋಗದ ಮೊದಲ ವ್ಯಕ್ತಿ. ನಂತರ ಪ್ರತಾಪ್ ಸಿಂಹ. ಈಗ ತೇಜಸ್ವಿ ಸೂರ್ಯ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ನಿಶ್ಚಿತವಾಗಿ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ. ಅವರನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ತಾವೇ ಹೊತ್ತಿರುವುದಾಗಿ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿನ ಸೀಟು ಹಂಚಿಕೆಗೂ, ಆರೆಸ್ಸೆಸ್‌ಗೂ ಯಾವ ಸಂಬಂಧವೂ ಇಲ್ಲ. ಪಕ್ಷ ತಯಾರಿಸಿದ ಪಟ್ಟಿಯಲ್ಲಿ ಇಪ್ಪತ್ತಾರು ಮಂದಿಗೆ ಟಿಕೆಟ್ ನೀಡಲಾಗಿದೆ. ಎರಡು ಸೀಟುಗಳ ಹಂಚಿಕೆ ವಿಷಯ ಬಂದಾಗ ಹೈಕಮಾಂಡ್ ತನ್ನ ವಿವೇಚನೆಯನ್ನು ಬಳಸಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ದ. ಪಕ್ಷದಲ್ಲಿ ಈಗ ಯಾವ ಅಸಮಾಧಾನಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದಲ್ಲಿ ಏಳು ರ‍್ಯಾಲಿಗಳಲ್ಲಿ ಪಾಲ್ಗೊಳ್ಳಬೇಕೆಂದು ಮೊದಲು ನಿರ್ಧರಿಸಲಾಗಿತ್ತು. ಆದರೆ ಈಗ ತುಮಕೂರು, ಹಾಸನ ಸೇರಿ ಒಂದೆರಡು ಕಡೆ ಹೆಚ್ಚಾಗಿ ಭಾಗವಹಿಸಬಹುದು ಎಂದು ಅಶೋಕ್ ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆಯ ನಂತರ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬದಲಾದರೆ ಅದಕ್ಕೆ ಸಿದ್ದರಾಮಯ್ಯ ಅವರ ಆಪರೇಷನ್ ಕಾರಣವಾಗಲಿದೆಯೇ ಹೊರತು ಆಪರೇಷನ್ ಕಮಲ ಅಲ್ಲ. ಲೋಕಸಭಾ ಚುನಾವಣೆಯ ನಂತರ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಬೀಳಿಸಲು ನಾವು ಯತ್ನಿಸುವುದಿಲ್ಲ. ಒಂದು ವೇಳೆ ಬಿದ್ದರೆ ಅದಕ್ಕೆ ಸಿದ್ಧರಾಮಯ್ಯ ಅವರಲ್ಲದೆ ಬೇರ‍್ಯಾರೂ ಕಾರಣರಾಗುವುದಿಲ್ಲ. ಈ ಹಿಂದೆ ನಾವೇನೂ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿರಲಿಲ್ಲ ಎಂದು ಅಶೋಕ್ ಹೇಳಿದರು.
Comments are closed.