ಹಾಸನ: ಅಪ್ಪ, ಮಕ್ಕಳು, ಸೊಸೆಯಂದಿರ ಕಾಟವೇ ಸಾಕಾಗಿತ್ತು. ಈಗ ಮೊಮ್ಮಕ್ಕಳ ಕಾಟ ಬೇರೆ ಶುರುವಾಗಿದೆ. ಅವರೆಲ್ಲರ ದಬ್ಬಾಳಿಕೆಯನ್ನು ಕೊನೆಗಾಣಿಸೋ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಹಾಸನದ ಬೇಲೂರಿನಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಹಣ, ಹೆಂಡ, ತೋಳ್ಬಲ, ಅಧಿಕಾರದಿಂದ ಗೆಲ್ಲಬಹುದು ಎಂದುಕೊಂಡವರಿಗೆ ಜನರು ತಕ್ಕಪಾಠ ಕಲಿಸಬೇಕು ಎಂದಿದ್ದಾರೆ.
ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡುವ ಚಿಂತನೆ ಮಾಡಲಾಗಿದೆ. ಸಾಮಾನ್ಯ ನಾಗರಿಕ ಸಂಹಿತೆ ಬಗ್ಗೆ ಮೋದಿ ಹೇಳಿದ್ದಾರೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲು ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ಆ ಎಲ್ಲ ಯೋಜನೆಗಳ ಜಾರಿಗೆ ಎ. ಮಂಜು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಲೂಟಿ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಸಂಕೋಚವಿಲ್ಲ. ಕುಮಾರಸ್ವಾಮಿ ಅವರು ಸಿಎಂ ಆದ 24 ಗಂಟೆಯೊಳಗೆ ಸಾಲಾ ಮನ್ನಾ ಮಾಡುತ್ತೇನೆ ಎಂದಿದ್ದರು. 10 ತಿಂಗಳಾಯ್ತು ಆದರೆ, ಇದುವರೆಗೂ ನಾಲ್ಕೂವರೆ ಕೋಟಿ ಸಾಲ ಮಾತ್ರ ಮನ್ನಾ ಆಗಿದೆ. ಯಾವುದೇ ಅಭಿವೃದ್ಧಿ ಆಗದೆ ಈ ಸರ್ಕಾರ ಬದುಕಿದ್ದೂ ಸತ್ತಂತಾಗಿದೆ. ಒಬ್ಬ ಸಿಎಂ ಆಗಿ ಪುಲ್ವಾಮ ದಾಳಿ ಬಗ್ಗೆ ಗೊತ್ತಿದ್ದರೂ ಹೇಳದಿರೋದು ದೇಶದ್ರೋಹ ಅಲ್ಲವೇ? ಒಬ್ಬ ಬೇಜವಾಬ್ದಾರಿ ಸಿಎಂ ಏನು ಬೇಕಾದರೂ ಮಾತನಾಡುತ್ತಾರೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಇದೇ ಕುಮಾರಸ್ವಾಮಿ ಅಂಬರೀಶ್ ಬದುಕಿದ್ದಾಗ ಅವರೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತಿದ್ದರು? ಅವರ ಸಾವಿನ ನಂತರ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋದರು. ಅಂಥವರು ಅಧಿಕಾರದ ವಿಷಯ ಬಂದಾಗ ಈಗ ಅಂಬರೀಶ್ ಪತ್ನಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ನ್ಯಾಯವೇ? ಪ್ರಚಾರಕ್ಕೆ ಕುಮಾರಸ್ವಾಮಿಯವರಿಗೆ ಹೆಲಿಕಾಪ್ಟರ್ ಸಿಕ್ಕಿಲ್ವಂತೆ, ಅದಕ್ಕೆ ಮೋದಿ ಕಾರಣವಂತೆ. ಇಂತಹ ಹೇಳಿಕೆಗಳಿಗೆ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ಸಿಎಂಗೆ ತಲೆ ಕೆಟ್ಟಿದೆ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಏನಿದೆ? ಎಂದು ಬಿಎಸ್ವೈ ಲೇವಡಿ ಮಾಡಿದ್ದಾರೆ.
Comments are closed.