ಬೆಂಗಳೂರು: ಖಡಕ್ ಅಧಿಕಾರಿಯಾಗುವುದರ ಮೂಲಕ ಯುವಕರಿಗೆ ಪ್ರೇರಣೆಯಾದವರು ಡಿಸಿಪಿ ಅಣ್ಣಾಮಲೈ. ತಾನೊಬ್ಬ ಅಧಿಕಾರಿ ಎಂಬ ದರ್ಪವಿಲ್ಲದೆ ಜನರ ಕಷ್ಟಕ್ಕೆ ಧ್ವನಿಯಾದ ಅಣ್ಣಾಮಲೈ ಯಾವುದೇ ಸಿನಿಮಾ ಸ್ಟಾರ್ಗೆ ಕಡಿಮೆ ಇಲ್ಲದಂತೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಸ್ಪೂರ್ತಿದಾಯಕ ಮಾತಿನ ಮೂಲಕ ಅನೇಕ ಯುವಕರಿಗೆ ಪ್ರೇರಣೆಯಾಗಿದ್ದಾರೆ.
ನಿಷ್ಠಾವಂತ ಅಧಿಕಾರಿಯಾಗಿರುವ ಅಣ್ಣಾ ಮಲೈ ತಮ್ಮ ಕೆಲಸದ ಮೂಲಕ ಸದ್ದು ಮಾಡಿದ ಅಧಿಕಾರಿ. ಅಂತಹ ಅವರ ಕೆಲಸದಿಂದ ಪ್ರೇರಣೆಗೊಂಡ ಯುವಕನೊಬ್ಬ ಈಗ ಮತ ಚಲಾಯಿಸುವುದಕ್ಕೆ ದೂರದ ಜರ್ಮನಿಯಿಂದ ನಾಡಿಗೆ ಆಗಮಿಸುತ್ತಿದ್ದಾರೆ. ಅಲ್ಲದೇ ನನ್ನ ಈ ನಿರ್ಧಾರಕ್ಕೆ ಕಾರಣ ನೀವೇ ಎಂದು ಅವರಿಗೆ ಸಂದೇಶ ಕಳುಹಿಸಿದ್ದಾರೆ.
ಮತ ಚಲಾಯಿಸುವುದಕ್ಕಾಗಿ ದೂರದ ದೇಶದಿಂದ ಭಾರತಕ್ಕೆ ಆಗಮಿಸಬೇಕಾ ಎಂಬುವವರು ನಮ್ಮಲ್ಲಿ ಕಡಿಮೆ ಇಲ್ಲ. ಒಂದು ಮತದಿಂದ ಅಂತಹ ವ್ಯತ್ಯಾಸವೇನಾಗಲ್ಲ ಎಂದು ಅಸಡ್ಡೆ ತೋರುವ ಮಂದಿ ನಮ್ಮಲ್ಲಿ ಅನೇಕರಿದ್ದಾರೆ. ಇಲ್ಲೊಬ್ಬ ಯುವಕನಿಗೂ ಕೂಡ ಅದೇ ರೀತಿ ಅನ್ನಿಸಿದ್ದಿರಬಹುದು. ಆದರೆ ಡಿಸಿಪಿ ಅಣ್ಣಾಮಲೈ ಕೆಲಸಗಳು, ಅವರ ಮಾತುಗಳಿಂದ ಪ್ರಭಾವಿತರಾಗಿ ತಮ್ಮ ಹಕ್ಕು ಚಲಾಯಿಸಲು ಮುಂದಾಗಿದ್ದಾರೆ. ಜರ್ಮನಿಯಲ್ಲಿ ಎಂಎಸ್ ಓದುತ್ತಿರುವ ಪ್ರೀತೇಶ್ ಈ ನಿರ್ಧಾರ ಕೈ ಗೊಂಡಿರುವ ಯುವಕ.
“ದೂರದ ಜರ್ಮನಿಯಲ್ಲಿ ವಿದ್ಯಾಭ್ಯಾಸದಲ್ಲಿರುವ ನಾನು ಕಳೆದ ಆರು ತಿಂಗಳಿನಿಂದ ನಿಮ್ಮ ಮಾತುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಆಲಿಸುತ್ತಿದ್ದಾರೆ. ಇದರಿಂದಾಗಿಯೇ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದು ನಿರ್ಧಾರಿಸಿ ಭಾರತಕ್ಕೆ ಬರುತ್ತಿದ್ದೇನೆ. ಇದಕ್ಕೆ ಕಾರಣ ನೀವು. ಈ ಸಂದರ್ಭದಲ್ಲಿ ನಿಮ್ಮನ್ನು ಸಾಧ್ಯವಾದರೆ ಒಂದೈದು ನಿಮಿಷದ ಮಟ್ಟಿಗಾದರೂ ಭೇಟಿಯಾಗಬೇಕೆಂದಿದ್ದೇನೆ. ಚುನಾವಣಾ ಸಂದರ್ಭದಲ್ಲಿ ನೀವು ಎಷ್ಟು ಬ್ಯುಸಿ ಎಂದು ತಿಳಿದಿದ್ದರೂ, ಈ ಅವಕಾಶ ಕೋರುತ್ತಿದ್ದೇನೆ,” ಎಂದು ಕೇಳಿಕೊಂಡಿದ್ದಾರೆ.
ಯುವಕನ ಈ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಡಿಸಿಪಿ ಅಣ್ಣಾಮಲೈ, ನಿಮ್ಮ ಸಂದೇಶ ನನಗೆ ತಲುಪಿದೆ. ನಿಮ್ಮ ಒಂದು ಮತವೂ ಅಮೂಲ್ಯ. ಬದಲಾವಣೆಗೆ ಇದು ದಾರಿಯಾಗಲಿದೆ. ತಾಯ್ನಾಡಿಗೆ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಪ್ರಾಮಾಣಿಕ, ಜವಬ್ದಾರಿಯುತ ಅಧಿಕಾರಿಯೊಬ್ಬ ಸಮಾಜದಲ್ಲಿ ಯಾವ ರೀತಿ ಬದಲಾವಣೆ ಮಾಡಬಹುದು ಎಂಬುದಕ್ಕೆ ಮಾದರಿಯಾಗಿ ಡಿಸಿಪಿ ಅಣ್ಣಾಮಲೈ ಉದಾಹರಣೆಯಾಗಿರುವುದು ಸುಳ್ಳಲ್ಲ.
Comments are closed.