ಕರ್ನಾಟಕ

ನಮ್ಮ ಮನೆಯ ಹೆಣ್ಣು ಮಕ್ಕಳ ಕುರಿತು ಮಾತನಾಡಿದರೆ ರಕ್ತ ಕುದಿಯುತ್ತದೆ: ನಟ ಯಶ್

Pinterest LinkedIn Tumblr


ಮಂಡ್ಯ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನ. ಈ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಸ್ವಾಭಿಮಾನಿ ಸಮ್ಮಿಲನ ಸಮಾವೇಶ ಆಯೋಜಿಸಲಾಗಿತ್ತು. ಆರಂಭದಿಂದಲೂ ಸುಮಲತಾ ಪರವಾಗಿ ಮತಯಾಚಿಸಿದ್ದ ನಟ ಯಶ್ ಇಂದು ವೇದಿಕೆಯಲ್ಲಿ ವಿರೋಧಿಗಳ ವಿರುದ್ಧ ಗುಡುಗಿದರು. ನಾವು ಪ್ರಚಾರದ ವೇಳೆ ತಾಳ್ಮೆಯಿಂದಿದ್ದೆವು. ಎಲ್ಲವನ್ನು ಸಹಿಸಿಕೊಂಡೆವು. ಆದರೇನು ಮಾಡುವುದು ನಮ್ಮ ರಕ್ತ ಕೇಳಲ್ವೇ, ಕುದೀತದೆ. ಅದಕ್ಕಾಗಿ ಅವರಿಗೆ ಅವರದೇ ಭಾಷೆಯಲ್ಲಿ ತಿರುಗೇಟು ನೀಡಬೇಕಾಯಿತು ಎಂದು ಪರೋಕ್ಷವಾಗಿ ಯಶ್ ತಿಳಿಸಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಶ್, ಇಷ್ಟು ಕೆಟ್ಟದಾಗಿ ನಮ್ಮ ಬಗ್ಗೆ ಯಾರೂ ಮಾತಾಡಿಲ್ಲ. ಯಾವ ಊರಲ್ಲೂ ಇಷ್ಟು ಕೆಟ್ಟದಾಗಿ ಮಾತನಾಡಿಲ್ಲ. ಚುನಾವಣೆ ಯಾವುದರ ಮೇಲೆ ನಡೀತಿದೆ. ಪ್ರಚಾರದ ವೇಳೆ ನಾವೆಲ್ಲ ತಾಳ್ಮೆಯಿಂದಿದ್ದೆವು. ಎಲ್ಲವನ್ನೂ ನುಂಗಿಕೊಂಡಿದ್ದೆವು. ಆದರೆ ನಮ್ಮ ರಕ್ತ ಕೇಳಲಿಲ್ಲ. ಮನೆ ಹೆಣ್ಮಕ್ಕಳ ಬಗ್ಗೆ ಮಾತಾಡಿದರೆ ಸುಮ್ಮನೆ ಇರೋಕೆ ಆಗಲ್ಲ. ಅವರೆಷ್ಟು ಶಕ್ತಿಶಾಲಿಯೇ ಆಗಿದ್ದರೂ ಸುಮ್ಮನಿರಲ್ಲ. ನಿಮ್ಮೂರಿನ ಸೊಸೆ ಚುನಾವಣೆಗೆ ನಿಲ್ಲಬಾರದಾ? ಎಂದು ಪ್ರಶ್ನಿಸಿದರು.

ಕೆಲವರು ಸ್ವಾಭಿಮಾನ ಪದವನ್ನು ಲೇವಡಿ ಮಾಡುತ್ತಾರೆ. ಸ್ವಾಭಿಮಾನ ಇರುವವರು ಹೀಗೆ ಬಂದು ನಿಲ್ಲೋದು. ಮೊಬೈಲಲ್ಲಿ 500 ರೂ. ಆಫರ್ ಕೊಟ್ಟೋರಲ್ಲ ಎಂದು ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಯಶ್ ಇದೇ ವೇಳೆ ತಿರುಗೇಟು ನೀಡಿದರು.

ಜನ ಸೇರುತ್ತಿರುವುದು ನಟರನ್ನು ನೋಡೋಕೆ ಅಂತಾರೆ. 10 ದಿನದಿಂದ ನಾವಿಲ್ಲಿ ಓಡಾಡುತ್ತಲೇ ಇದ್ದೀವಿ. ಹಾಗಾದ್ರೆ ಇವತ್ತು ಯಾಕಪ್ಪ ಇಷ್ಟು ಜನ ಬಂದಿದ್ದೀರಿ? ನೋಡೋಕೆ ಬರ್ತಾರಂತೆ, ಓಟ್ ಹಾಕಲ್ವಂತೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ರಾಕಿಂಗ್ ಸ್ಟಾರ್ ಟಾಂಗ್ ನೀಡಿದರು.

ನಮ್ಮನ್ನು ವಿರೋಧಿಸಲು ಅವರ ಬಳಿ ಪಾಯಿಂಟ್ಸ್ ಇಲ್ಲ. ಹೀಗಾಗಿ ಸಿನಿಮಾದವರನ್ನು ನಂಬಬೇಡಿ ಅಂತಾರೆ. ಇನ್ನೊಂದೆಡೆ ನಾನು ಸಹ ಸಿನಿಮಾ ನಿರ್ಮಾಪಕ ಅಂತೇಳುತ್ತಾರೆ. ಈ ಮೂಲಕ ಯಶ್ ಕುಮಾರಸ್ವಾಮಿ ಅವರ ಕಾಲೆಳೆದರು. ಮತ್ತೊಂದೆಡೆ ಜಾತಿ ಮೇಲೆ ಅಪಪ್ರಚಾರ ಮಾಡುತ್ತಾರೆ ಎಂದು ಹೇಳಿದ ಯಶ್, ಜಾತಿ ವಿಷಯವನ್ನು ಕೆದಕಿದ ಜೆಡಿಎಸ್ ಮುಖಂಡರಿಗೆ ಅಭಿಷೇಕ್ ಒರಿಜಿನಲ್ ಗೌಡ ಎಂದು ಮರುತ್ತರ ನೀಡಿದರು.

ನಾನು ಕಳ್ಳರ ಪಕ್ಷ ಅಂತ ಹೇಳಿಲ್ಲ- ಯಶ್ ಸ್ಪಷ್ಟನೆ
ನಾನು ಜೆಡಿಎಸ್​ ಪಕ್ಷನ್ನು ಕಳ್ಳರ ಪಕ್ಷ ಅಂತ ಎಲ್ಲೂ ಹೇಳಿಲ್ಲ ಎಂದು ಯಶ್ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡಿದ ಘಟನೆಗೆ ಸ್ವಾಭಿಮಾನಿ ಸಮಾವೇಶ ಸಾಕ್ಷಿಯಾಯಿತು. ಕೆಲ ದಿನಗಳಿಂದ ಸಿಎಂ ಕುಮಾರಸ್ವಾಮಿ ಯಶ್ ನಮ್ಮ ಪಕ್ಷವನ್ನು ಕಳ್ಳರ ಪಕ್ಷವೆಂದು ಜರಿದಿದ್ದಾರೆ. ಅವರಿಗೆ ನಮ್ಮ ಕಾರ್ಯಕರ್ತರು ಸರಿಯಾದ ಉತ್ತರ ನೀಡಲಿದ್ದಾರೆ. ಆದರೆ ಅವರೆಲ್ಲರೂ ನನಗೆ ನೋವಾಗಬಾರದೆಂದು ಸುಮ್ಮನಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದರು.

ಈ ಹೇಳಿಕೆಗೆ ಸ್ಪಷ್ಟನೆ ನೀಡಿದ ರಾಕಿ ಭಾಯ್, ನಾನು ತುಂಬಾ ನಂಬುವ ದೇವರು ಮಂಜುನಾಥ ಸ್ವಾಮಿ. ಅವರ ಪಾರ್ಟಿಯನ್ನು ನಾನು ಕಳ್ಳರ ಪಕ್ಷ ಅಂತ ಹೇಳಿದ್ರೆ ಮಂಜುನಾಥನ ಆಣೆ. ನಾನು ಸುಳ್ಳು ಹೇಳಿದ್ದರೆ ಕರ್ನಾಟಕ ಬಿಟ್ಟು ಹೋಗುತ್ತೇನೆ. ಸುಳ್ಳು ಹೇಳಿ ಬಚಾವ್ ಆಗೋಕೆ ಸಾಧ್ಯವಿಲ್ಲ ಎಂದು ಆಣೆ ಪ್ರಮಾಣ ಮಾಡಿದರು.

Comments are closed.