
ಹಾಸನ: ಸದ್ಯ ರಾಜ್ಯ ರಾಜಕೀಯದಲ್ಲಿ ಶಾಸಕ ರಮೇಶ್ ಜಾರಕಿಹೊಳಿಯದ್ದೇ ಸುದ್ದಿ. ರಾಜಿನಾಮೆ ಕೊಟ್ಟೇ ಬಿಡ್ತಿನಿ, ಸರ್ಕಾರ ಉರುಳಿಸಿಯೇ ತೀರುತ್ತೇನೆ ಎಂದು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಇತ್ತ ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎನಿಸಿರುವ ಹೆಚ್.ಡಿ. ರೇವಣ್ಣ ಅವರು ಹಾಸನದಲ್ಲಿ ಕೂತ್ಕೊಂಡು, ಸರ್ಕಾರ ಬೀಳೋದಿಲ್ಲಾ, ಹೆಚ್ಎಂಟಿ ಗೆದ್ದು ದೆಹಲಿಗೆ ಹೋಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿಯುತ್ತಿದ್ದಾರೆ.
ಹೆಚ್ಎಂಟಿ ತಂಡ ದೆಹಲಿಗೆ:
ಹೆಚ್ಎಂಟಿಯಲ್ಲಿ, ಎಂದರೆ ಹಾಸನ, ಮಂಡ್ಯ ಮತ್ತು ತುಮಕೂರಿನಲ್ಲಿ ಪ್ರಜ್ವಲ್, ನಿಖಿಲ್ ಮತ್ತು ದೇವೇಗೌಡರು ಈ ಮೂವರು ಗೆದ್ದು ಲೋಕಸಭೆಗೆ ಹೋಗುತ್ತಾರೆ. ಜೊತೆಗೆ ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುತ್ತೆ. ದೇವೇಗೌಡರು ದೆಹಲಿ ಗರಡಿಯಲ್ಲಿ ಪಳಗಿದ್ದಾರೆ ಎಂದು ಹೇಳುವ ಮೂಲಕ ರೇವಣ್ಣ ಕುತೂಹಲ ಮೂಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದರೂ ಪರವಾಗಿಲ್ಲ ಎನ್ನುವ ಧಾಟಿಯಲ್ಲಿ ಮಾತನಾಡಿರುವ ಸೂಪರ್ ಸಿಎಂ, ತಮಗೆ ಸರ್ಕಾರ ಉಳಿಸಿಕೊಳ್ಳೋದು ಹೇಗೆಂದು ಗೊತ್ತಿದೆ ಎಂದು ಅಂತ ಕೈ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಹಿಡಿತ ಸಾಧಿಸಿರುವ ಜೆಡಿಎಸ್ನ ಸೂಪರ್ ಸಿಎಂ ಹೆಚ್.ಡಿ. ರೇವಣ್ಣ ಇದೀಗ ಕೇಂದ್ರದಲ್ಲಿ ಒಂದು ವೇಳೆ ಅತಂತ್ರ ಬಂದ್ರೆ ಅಲ್ಲಿಯೂ ದೇವೇಗೌಡರ ಮೂಲಕ ಜೆಡಿಎಸ್ ಆಟದ ಕನಸಲ್ಲಿದ್ದಾರೆ.
ಕರ್ನಾಟಕದ ಈಗಿನ ರಾಜ್ಯ ರಾಜಕಾರಣವನ್ನ ನೋಡಿದ್ರೆ ಉತ್ತರದಲ್ಲಿ ಸರ್ಕಾರ ಉರುಳಿಸೋ ತಂತ್ರ ನಡಿತಿದ್ರೆ ದಕ್ಷಿಣದಲ್ಲಿ ಸರ್ಕಾರ ಕಾಪಾಡುವ ಪ್ರತಿತಂತ್ರ ನಡೆಯುತ್ತಿದೆ ಅನ್ನೋದು ಖಚಿತ. ಅಪ್ಪಿ ತಪ್ಪಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರಿಗೆ ಸಂಸದರ ಸ್ಥಾನಗಳು ಕಡಿಮೆಯಾದರೆ ಜೆಡಿಎಸ್ ಪಕ್ಷದ ಹೆಚ್ಎಂಟಿ ತಂಡ ಮಹತ್ತರ ಪಾತ್ರ ವಹಿಸಲಿದೆ ಅನ್ನೋ ಗುಟ್ಟನ್ನ ಸಚಿವ ರೇವಣ್ಣ ಬಿಟ್ಟುಕೊಟ್ಟಿದ್ದಾರೆ.
ಒಂದು ವೇಳೆ ಸೂಪರ್ ಸಿಎಂ ರೇವಣ್ಣ ಅವರ ಭವಿಷ್ಯ ನಿಜವಾದರೆ ಕೇಂದ್ರದಲ್ಲೂ ಕರ್ನಾಟಕದ ಪವರ್ ಪಾಲಿಟಿಕ್ಸ್ ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಎರಡು ಮಾತಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಈ ರಾಜಕೀಯ ಚದುರಂಗದಾಟದ ಸ್ಪಷ್ಟತೆ ಗೊತ್ತಾಗಲಿದೆ.
Comments are closed.