ಬೆಂಗಳೂರು: ಪ್ರಜಾಪ್ರಭುತ್ವಕ್ಕೆ ತೀರ ವ್ಯತಿರಿಕ್ತವಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಥವಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ಬಗ್ಗೆ ಬೆಟ್ಟಿಂಗ್ ಅಕ್ರಮವಾಗಿ ಜೋರಾಗಿ ನಡೆಯುತ್ತಿದೆ.
ಮಂಡ್ಯ ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಸಟ್ಟಾ ಎಂಬ ಬೆಟ್ಟಿಂಗ್ ಮಾರ್ಕೆಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಸ್ವತಃ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ. 100 ರೂಪಾಯಿಯಿಂದ ಲಕ್ಷಗಳವರೆಗೆ ಬೆಟ್ಟಿಂಗ್ ಜೂಜಾಟ ನಡೆಯುತ್ತಿದ್ದು ಇದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ವಿಶೇಷ ತಂಡ ರಚಿಸಲಾಗಿದೆ.
ಉತ್ತರ ಭಾರತದಲ್ಲಿ ರಾಜಕೀಯ ಮೂಲಾಧಾರಿತ ಸಟ್ಟಾ ಬಜಾರ್ ಜನಪ್ರಿಯವಾಗಿದ್ದು ಅದು ಕರ್ನಾಟಕಕ್ಕೆ ಈ ವರ್ಷ ಹೊಸದಾಗಿ ಕಾಲಿಟ್ಟಿದೆ, ಲೋಕಸಭೆ ಚುನಾವಣೆಯ ಈ ಸಂದರ್ಭದಲ್ಲಿ ಬೆಟ್ಟಿಂಗ್ ಜೂಜು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.ರಾಜ್ಯದ ಮಂಡ್ಯ, ಹಾಸನ, ತುಮಕೂರು, ಚಿಕ್ಕೋಡಿ ಮತ್ತು ಗುಲ್ಬರ್ಗ ಕ್ಷೇತ್ರಗಳಲ್ಲಿ ಚುನಾವಣಾ ಸಂಬಂಧಿ ಜೂಜಾಟ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಉದಾಹರಣೆಗೆ ಮಂಡ್ಯ ಜಿಲ್ಲೆಯಲ್ಲಿ, 1 ಲಕ್ಷಕ್ಕೆ ಬೆಟ್ಟಿಂಗ್ ಕಟ್ಟಿದರೆ ಸುಮಲತಾ ಗೆದ್ದರೆ 1ಲಕ್ಷದ 80 ಸಾವಿರ ರೂಪಾಯಿ ಸಿಗುತ್ತದೆ. ನಿಖಿಲ್ ಗೌಡ ಗೆದ್ದರೆ 1 ಲಕ್ಷದ 40 ಸಾವಿರ ಸಿಗುತ್ತದೆ. ನಿಖಿಲ್ ಗೆಲುವಿನ ನಿರೀಕ್ಷೆ ಹೆಚ್ಚಾಗಿರುವುದರಿಂದ ಬೆಟ್ಟಿಂಗ್ ಮೊತ್ತ ಕಡಿಮೆಯಾಗಿದೆ.
ತಮ್ಮ ಗಂಡ ಮತ್ತು ಗಂಡು ಮಕ್ಕಳು ಜಮೀನು, ಆಸ್ತಿ, ದನ ಕರುಗಳು ಮತ್ತು ವಾಹನವನ್ನು ಅಡವಿಟ್ಟು ಬೆಟ್ಟಿಂಗ್ ಕಟ್ಟಿದ್ದಾರೆ ಎಂದು ಬಹುತೇಕ ಮಹಿಳೆಯರಿಂದ ದೂರುಗಳು ಬಂದಿವೆ. ಚುನಾವಣೆ ಫಲಿತಾಂಶ ಬಂದ ಮೇಲೆ ಎಲ್ಲಿ ತಮ್ಮ ಕುಟುಂಬ ಬೀದಿಗೆ ಬರುತ್ತದೋ ಎನ್ನುವ ಆತಂಕ ಹೆಂಗಸರಿಗೆ. ಆನ್ ಲೈನ್ ನಲ್ಲಿ ವಾಟ್ಸಾಪ್ ಆಪ್ ನಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದೆ. ಆದರೆ ಇದುವರೆಗೆ ಯಾವುದೇ ರಾಜಕೀಯ ಬೆಟ್ಟಿಂಗ್ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿಲ್ಲ.
ಗುಲ್ಬರ್ಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ, ತುಮಕೂರಿನಲ್ಲಿ ಬಿ ಎಸ್ ಬಸವರಾಜು, ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ್ ಜೊಲ್ಲೆ ಪರ ಬೆಟ್ಟಿಂಗ್ ನಡೆದರೆ ರಾಷ್ಟ್ರ ರಾಜಕಾರಣದಲ್ಲಿ ರಾಜಸ್ತಾನ, ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಕೂಡ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ಕೇಳಿಬರುತ್ತಿದೆ.
Comments are closed.