ಬೆಂಗಳೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಬುಧವಾರ ಸಚಿವ ಡಿಕೆ ಶಿವಕುಮಾರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರಗಳೂ ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ.
ಇಂದು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು 88ನೇ ಹುಟ್ಟು ಹಬ್ಬದ ಪ್ರಯುಕ್ತ ಅವರಿಗೆ ಶುಭ ಕೋರಲು ಸದಾಶಿವನಗರದ ನಿವಾಸಕ್ಕೆ ಉಭಯ ನಾಯಕರು ಆಗಮಿಸಿದ್ದರು.
ಈ ವೇಳೆ ಶಿವಕುಮಾರ್ ಅವರನ್ನು ಮನೆ ಬಾಗಿಲಿನಲ್ಲಿ ಕಂಡೋಡನೆಯೇ ನಗುನಗುತ್ತಾ ತೆರಳಿದ ಪ್ರತಾಪ್ ಸಿಂಹ ಕಾಲಿಗೆ ಬಿದ್ದಿದ್ದಾರೆ. ಶಿವಕುಮಾರ್ ಅವರೂ ನಗುನಗುತ್ತಾ ಪ್ರತಾಪ್ ಸಿಂಹ ಅವರ ಬೆನ್ನು ತಟ್ಟಿ ಆಶೀರ್ವದಿಸಿದ್ದಾರೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮೈಸೂರಿನಿಂದ ವಿಜಯ್ ಶಂಕರ್ ಕಣಕ್ಕೆ ಇಳಿದಿದ್ದರು. ಈ ವೇಳೆ ಸಿದ್ದರಾಮಯ್ಯನವರು ಭರ್ಜರಿಯಾಗಿ ಪ್ರಚಾರ ನಡೆಸಿದ್ದರೆ ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಮೈಸೂರಿನತ್ತ ತಲೆ ಹಾಕಿರಲಿಲ್ಲ. ಈ ವಿಚಾರ ಈಗಲೂ ಚರ್ಚೆ ಆಗುತ್ತಿದೆ. ಈ ಚರ್ಚೆಯ ನಡುವೆಯೇ ಪ್ರತಾಪ್ ಸಿಂಹ, ಡಿಕೆಶಿ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಅಚ್ಚರಿ ಮೂಡಿಸಿದೆ.
ಇನ್ನು ಡಿಕೆ ಶಿವಕುಮಾರ್ ಅವರು ಹಿರಿಯ ನಾಯಕರು. ಹಿರಿಯರ ಕಾಲಿಗೆ ಅಡ್ಡ ಬಿದ್ದರೆ ತಪ್ಪು ಏನಿಲ್ಲ ಎಂದು ಪ್ರತಾಪ್ ಸಿಂಹ ಬೆಂಬಲಿಗರು ಹೇಳಿದ್ದರೂ ರಾಜಕೀಯದಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Comments are closed.