ಕರ್ನಾಟಕ

ದಿನಕ್ಕೊಂದು ಹೇಳಿಕೆ: ಕಾಂಗ್ರೆಸ್​ ತಂತ್ರಕ್ಕೆ ಜೆಡಿಎಸ್​ನಿಂದಲೂ ಪ್ರತಿತಂತ್ರ?

Pinterest LinkedIn Tumblr


ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​ ಜೆಡಿಎಸ್​ ಮೈತ್ರಿ ಸರ್ಕಾರಕ್ಕೆ ಶನಿಕಾಟ ಪ್ರಾರಂಭವಾದಂತೆ ಕಾಣ್ತಿದೆ. ಸರ್ಕಾರ ಯಾವಾಗ ಬೀಳುತ್ತೋ ಅನ್ನೋ ಆತಂಕ ಜೆಡಿಎಸ್​ ನಾಯಕರಿಗೆ ತಲೆಬಿಸಿ ತಂದಿಟ್ಟಿದೆ. ಅದರಲ್ಲೂ ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್​ ಶಾಸಕರು ನೀಡುತ್ತಿರುವ ದಿನಕ್ಕೊಂದು ಹೇಳಿಕೆಗಳು ಅವರನ್ನು ಇನ್ನಿಲ್ಲದಂತೆ ಕಾಡುತ್ತಿವೆ.

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್​, ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು ಪರೋಕ್ಷವಾಗಿ ಸರ್ಕಾರದ ವಿರುದ್ಧ ದಿನಕ್ಕೊಂದು ಹೇಳಿಕೆಗಳನ್ನು ನೀಡ್ತಿದ್ದಾರೆ. ದೋಸ್ತಿ ಪಕ್ಷದ ಶಾಸಕರ ಈ ಹೇಳಿಕೆಗಳೇ ಇದೀಗ ಜೆಡಿಎಸ್​ ವರಿಷ್ಠರನ್ನು ನಿದ್ರೆ ಮಾಡದಂತೆ ಮಾಡಿವೆ.

ಕಳೆದ ಮೂರ್ನಾಲ್ಕು ದಿನದ ಹಿಂದೆಯಷ್ಟೇ ಕಾಂಗ್ರೆಸ್​ ಶಾಸಕ ಎಸ್.ಟಿ.ಸೋಮಶೇಖರ್ ನಮಗೆ ಕೆಲವೊಂದು ಸಮಸ್ಯೆಗಳಾಗುತ್ತಿದ್ದು,ಇದನ್ನು ಬಗೆಹರಿಸಿಕೊಳ್ಳೋಕೆ ನಾವು ಹಲವು ಶಾಸಕರು ಸಭೆ ಸೇರ್ತಿದ್ದೇವೆ ಅಂತ ಹೇಳಿಕೆ ನೀಡಿದ್ದರು. ಇದು ಸಾಕಷ್ಟು ರಾದ್ಧಾಂತಕ್ಕೂ ಕಾರಣವಾಗಿತ್ತು. ಪಕ್ಷದ ಅಧ್ಯಕ್ಷರು ಹೇಳಿಲ್ಲ, ಶಾಸಕಾಂಗಪಕ್ಷದ ನಾಯಕರು ಹೇಳಿಲ್ಲ, ಆದರು ಕಾಂಗ್ರೆಸ್​ ಶಾಸಕರು ಸಭೆ ಸೇರೋದು ಅಂದರೆ ಏನು ಎಂಬ ಪ್ರಶ್ನೆಯನ್ನು ಜೆಡಿಎಸ್​ ನಾಯಕರು ಕಾಂಗ್ರೆಸ್​ ನಾಯಕರ ಮುಂದಿಟ್ಟಿದ್ದರು.

ಹೀಗಾಗಿ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿತ್ತು. ಎಲ್ಲವೂ ಸುಖಾಂತ್ಯವಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಎಸ್​.ಟಿ.ಸೋಮಶೇಖರ್ ಇವತ್ತು ಮತ್ತೆ ಸಮಾನ ಮನಸ್ಕ ಶಾಸಕರ ಸಭೆಯನ್ನು ನಡೆಸ್ತೇವೆ ಅಂತ ಹೇಳಿಕೆ ಕೊಟ್ಟಿದ್ದಾರೆ.

ಕೈ ಶಾಸಕರ ಈ ಹೇಳಿಕೆ ಜೆಡಿಎಸ್​ ನಾಯಕರಿಗೆ ಮತ್ತೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತೊಂದು ಕಡೆ ಇದರ ಹಿಂದೆ ಸಿದ್ದರಾಮಯ್ಯ ಕೈವಾಡ ಇದ್ಯಾ ಅನ್ನೋ ಅನುಮಾನವೂ ಕೂಡ ವ್ಯಕ್ತವಾಗ್ತಿದೆ.

ನಿಗಮ ಮಂಡಳಿಗಳಲ್ಲಿ ನಾವು ಡಮ್ಮಿ ಪೀಸ್ ಆಗಿದ್ದೇವೆ, ಎಲ್ಲವೂ ಸಿಎಂ ಅಣತಿಯಂತೆ ನಡೆಯುತ್ತಿದೆ ಎಂಬ ಅಸಮಾಧಾನ ಕಾಂಗ್ರೆಸ್​ ಶಾಸಕರದ್ದು. ಆದರೆ ಪರೋಕ್ಷವಾಗಿ ಕೈ ಶಾಸಕರನ್ನು ಮುಂದೆ ಬಿಟ್ಟು ಆಟವಾಡ್ತಿರೋದು ಮಾಜಿ ಸಿಎಂಸಿದ್ದರಾಮಯ್ಯ ಅನ್ನೋದು ಜೆಡಿಎಸ್​ ನಾಯಕರಿಗೂ ಗೊತ್ತಿದೆ. ಹೀಗಾಗಿ ನೀವು ಚಾಪೆ ಕೆಳಗೆ ತೂರಿದ್ರೆ ನಾವು ರಂಗೋಲಿ ಕೆಳಗೆ ನುಗ್ತೇವೆ ಅನ್ನೋ ಮನಸ್ಥಿತಿಗೆ ಬಂದಿದ್ದಾರೆ. ಸಚಿವ ಜಿಟಿಡಿ, ಸಾ.ರಾ.ಮಹೇಶ್ ಮುಂದೆ ಬಿಟ್ಟು ದೇವೇಗೌಡರೂ ​ ಗೇಮ್ ಆಡೋಕೆ ಶುರುಮಾಡಿದ್ದಾರೆ.

ಒಟ್ಟಿನಲ್ಲಿ ಒಂದುಕಡೆ ಸೋಮಶೇಖರ್​ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರ ಕೆಡವೋಕೆ ತೆರೆಮರೆಯಲ್ಲೇ ಸಿದ್ಧತೆ ನಡೆಸಿದ್ದಾರೆ. ಸರ್ಕಾರ ಬೀಳಿಸಿ ಪ್ರತಿಪಕ್ಷ ನಾಯಕನಾಗೋಕೆ ರೆಡಿಯಾಗಿದ್ದಾರೆ. ಮತ್ತೊಂದು ಕಡೆ ನಾವೂ ಕಡಿಮೆಯಿಲ್ಲವೆಂದು ಜೆಡಿಎಸ್ ನಾಯಕರೂ ಜಿಟಿಡಿ ಮುಂದೆ ಬಿಟ್ಟು ಸಿದ್ದರಾಮಯ್ಯಗೆ ಗುನ್ನ ಇಡೋಕೆ ನೋಡ್ತಿದ್ದಾರೆ. ಈ ರಾಜಕೀಯ ಮೇಲಾಟದಲ್ಲಿ ಯಾರ ಕೈ ಮೇಲಾಗುತ್ತೆ. ಯಾರ ಕೈ ಕೆಳಗಿಳಿಯುತ್ತೆ ಅನ್ನೋದನ್ನು ಕಾದುನೋಡ್ಬೇಕಿದೆ.

Comments are closed.