ಕರ್ನಾಟಕ

ಬೆಂಗಳೂರಿನಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ; ಮೂವರು ಇಂಜಿನಿಯರ್ ದುರ್ಮರಣ!

Pinterest LinkedIn Tumblr

ಬೆಂಗಳೂರು: ಹೆಲ್ಮೆಟ್ ಧರಿಸದೆ ತ್ರಿಬಲ್ಸ್ ರೈಡಿಂಗ್ ಮಾಡಿದ್ದು ಅಲ್ಲದೆ ಅತೀವೇಗವಾಗಿ ಹೋಗುತ್ತಿದ್ದಾಗ ರಸ್ತೆ ವಿಭಜಕಕ್ಕೆ ಬೈಕ್ ಗುದ್ದಿದ ಪರಿಣಾಮ ಮೂವರು ಟೆಕ್ಕಿ ದಾರುಣ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಎಲ್)ದ ಇಂಜಿನಿಯರ್, ಟಿ.ನರಸೀಪುರ ಮೂಲದ ಕಾರ್ತಿಕ್ (29), ಹೆಚ್ಎಎಲ್‌ನ ಇಂಜಿನಿಯರ್, ಕುಣಿಗಲ್ ನಿವಾಸಿ ಅನಿಲ್ (28) ಹಾಗೂ ಖಾಸಗಿ ಕಂಪನಿಯ ಸಾಫ್ಟ್‌ ವೇರ್ ಇಂಜಿನಿಯರ್ ಚಿಕ್ಕಬಳ್ಳಾಪುರ ನಿವಾಸಿ ಶ್ರೀನಾಥ್ (29) ಮೃತಪಟ್ಟವರು. ಈ ಮೂವರ ಪೈಕಿ ಒಬ್ಬನ ನಿಶ್ಚಿತಾರ್ಥ ಇದೇ ಗುರುವಾರ ನಡೆಯಬೇಕಿತ್ತು ಆದರೆ ವಿಧಿಯಾಟ ಬೇರೆಯಾಗಿತ್ತು.

ಮೃತಪಟ್ಟ ಮೂವರೂ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ 12.30ರ ಸುಮಾರಿಗೆ ಹೋಟೆಲ್ ಒಂದರಲ್ಲಿ ಪಾರ್ಟಿ ನಡೆಸಿ ಯಮಹಾ ಆರ್‌-5 ಬೈಕ್‌ನಲ್ಲಿ ಮೂವರೂ ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್ ಹೊಟೇಲ್ ಕಡೆಯಿಂದ ಮಾಗಡಿ ರಸ್ತೆಯ ಕೆ.ಹೆಚ್.ಬಿ. ಕಾಲೋನಿ ಕಡೆ ವೇಗವಾಗಿ ಹೋಗುತ್ತಿದ್ದರು. ಮಾರ್ಗಮಧ್ಯೆ ಸಿದ್ದಯ್ಯ ಪುರಾಣಿಕ್ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ವಿದ್ಯುತ್ ಕಂಬಕ್ಕೆ ಗುದ್ದಿ ಕೆಳಗೆ ಬಿದ್ದ ಮೂವರ ತಲೆಗೆ ತೀವ್ರ ಗಾಯಗೊಂಡ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.

ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅತಿವೇಗವೇ ಈ ದುರ್ಘಟನೆಗೆ ಕಾರಣವಾಗಿದೆ. ಅವರು ಮೂವರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿರುವ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

Comments are closed.