ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿರುವ ರಮೇಶ್ ಜಾರಕಿಹೊಳಿ ಒಂದೊಂದು ನಡೆಗಳು ಎರಡು ಪಕ್ಷಗಳ ಮುಖಂಡರಿಗೆ ದಿಗಿಲು ಹುಟ್ಟಿಸುತ್ತಿದೆ. ಇಂದು ರಾಯಚೂರು ಸಂಸದ ಬಿ.ವಿ.ನಾಯಕ್ ಅವರು ರಮೇಶ್ ಜಾರಕಿಹೊಳಿಯನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ನಾಯಕ್ ಅವರ ಮೂಲಕ ಅತೃಪ್ತ ಶಾಸಕರನ್ನು ಸೆಳೆಯಲು ರಮೇಶ್ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಏತನ್ಮಧ್ಯೆ ರಮೇಶ್ ಅವರ ತಂತ್ರವನ್ನು ವಿಫಲಗೊಳಿಸಲು ಸಿಎಂ ಕುಮಾರಸ್ವಾಮಿ ಅವರು ಬಿ.ವಿ. ನಾಯಕ್ ಅವರನ್ನು ತಮ್ಮ ಗೃಹ ಕಚೇರಿ ಕೃಷ್ಣಾಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.
ಇಂದು ಬೆಳಗ್ಗೆ ರಮೇಶ್ ಜಾರಕಿಹೊಳಿ ಅವರು ತಮ್ಮ ನಿವಾಸಕ್ಕೆ ಬಿ.ವಿ.ನಾಯಕ್ ಅವರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದರು. ಬಿ.ವಿ.ನಾಯಕ್ ಅವರ ಮೂಲಕ ರಾಯಚೂರು ಶಾಸಕರಿಗೆ ರಮೇಶ್ ಗಾಳ ಹಾಕಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಮೂಲಕ ಜಿಲ್ಲೆಯ ಬಸನಗೌಡ ದದ್ದಲ, ಪ್ರತಾಪಗೌಡ ಪಾಟೀಲ, ಲಿಂಗಸೂರ ಶಾಸಕ ಹೊಲಗೇರಿ ಸೇರಿ ಇತರೆ ಮುಖಂಡರನ್ನು ಸೆಳೆಯುವ ತಂತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿಯೇ ತಮ್ಮ ಸಂಬಂಧಿಯಾಗಿರುವ ಸಂಸದ ಬಿವಿ ನಾಯಕರನ್ನು ಇಂದು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಇವರೊಂದಿಗೆ ಸಿಎಂ ಎಚ್ಡಿಕೆ ಆಪ್ತ ನಾನಾಗೌಡ ಪಾಟೀಲ ಬಿರಾದರ ತೆರಳಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿತು.
ಸಿಎಂ ಭೇಟಿ
ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಬಿ ಬಿ ನಾಯಕ್ ಅವರು ಸಿಎಂ ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾದರು. ರಮೇಶ್ ಜಾರಕಿಹೊಳಿ ನಡೆ ಬಗ್ಗೆ ಸಿಎಂ ಜೊತೆ ಅವರು ಚರ್ಚೆ ನಡೆಸಿದ್ದಾರೆ. ಇಲ್ಲವೇ ಬಿ ವಿ ನಾಯಕ್ ಮೂಲಕ ರಮೇಶ್ ಜಾರಕಿಹೊಳಿ ಸಂಧಾನಕ್ಕೆ ಸಿಎಂ ಮುಂದಾದರೆ ಎಂಬ ಕುತೂಹಲದ ಪ್ರಶ್ನೆಯೂ ಮೂಡಿದೆ.
Comments are closed.