ಕರ್ನಾಟಕ

ಖರ್ಗೆ, ವೀರಪ್ಪ ಮೊಯ್ಲಿ, ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ಸಿನ ಘಟಾನುಘಟಿ ನಾಯಕರ ಸೋಲು

Pinterest LinkedIn Tumblr

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಣೆಗೆ ವೇದಿಕೆ ಸಿದ್ಧವಾಗುತ್ತಿದ್ದು, 28 ಕ್ಷೇತ್ರಗಳಲ್ಲಿ ಗರಿಷ್ಠ ಸ್ಥಾನ ಬಿಜೆಪಿಗೋ ಅಥವಾ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಕೂಟಕ್ಕೋ ಎಂಬುದು ಸ್ಪಷ್ಟವಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಹಬ್ಬದ ಲೋಕಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯದ ಹಂತದತ್ತ ತಲುಪಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ.

ಕರ್ನಾಟಕದ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಟ್ರೆಂಡ್‌ ಗೊತ್ತಾಗಿದೆ. ಆದರೆ ಮಂಡ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿದೆ. ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ನಡುವೆ ಮುನ್ನಡೆಯು ಹಾವು ಏಣಿಯಾಟವಾಡುತ್ತಿದೆ. ಮಂಡ್ಯದಲ್ಲಿ ಈಗ ಮತ ಎಣಿಕೆ ಇನ್ನಷ್ಟು ಚುರುಕು ಪಡೆದುಕೊಂಡಿದ್ದು, ಸುಮಲತಾ ಅಂಬರೀಷ್‌ ಮುನ್ನಡೆ ಹೆಚ್ಚಿಸಿಕೊಂಡಿದ್ದಾರೆ.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಬಿಜೆಪಿಯ ಪಿಸಿ ಮೋಹನ್‌ ಕೊನೆಗೂ ಜಯ ಗಳಿಸಿದ್ದಾರೆ. ಒಂದು ಹಂತದಲ್ಲಿ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ 25 ಸಾವಿರಕ್ಕೂ ಅಧಿಕ ಮತಗಳ ಅಂತರದ ಮುನ್ನಡೆ ಸಾಧಿಸಿದ್ದರು. ಆದರೆ ಪಿಸಿ ಮೋಹನ್‌ ಕೊನೆಗೆ ಗೆಲುವಿನ ನಗೆ ಬೀರಿದರು.

ಕಲಬುರಗಿಯಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಗೆ ಭಾರಿ ಸೋಲುಂಟಾಗಿದೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಉಮೇಶ್‌ ಜಾಧವ್‌ 83 ಸಾವಿರ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.

11 ಬಾರಿ ಗೆಲುವು ಸಾಧಿಸಿ ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರನಾಗಿ ಮೆರೆದಿದ್ದರು.

ಬೀದರ್‌ನಲ್ಲಿ ಬಿಜೆಪಿಯ ಭಗವಂತ ಖೂಬಾ ಕಾಂಗ್ರೆಸ್‌ನ ಈಶ್ವರ್‌ ಖಂಡ್ರೆ ವಿರುದ್ಧ ಗೆಲುವು ಸಾಧಿಸಿದ್ದಾರೆ.

ತುಮಕೂರು ಕ್ಷೇತ್ರದಲ್ಲಿ ಎಚ್‌ಡಿ ದೇವೇಗೌಡ ಭಾರಿ ಹಿನ್ನಡೆಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಸೂರ್ಯನ ತೇಜಸ್ಸು ಹೆಚ್ಚಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಬಿಕೆ ಹರಿ ಪ್ರದಾದ್‌ಗಿಂತ ತೇಜಸ್ವಿ ಸೂರ್ಯ ಮತ ಗಳಿಕೆ 2.5 ಲಕ್ಷ ಮತಗಳಿಗಿಂತಲೂ ಹೆಚ್ಚಾಗಿದ್ದು, ಗೆಲುವು ಖಚಿತವಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯ್ಲಿ ಸೋಲು ಅನುಭವಿಸಿದ್ದಾರೆ. ಬಿಜೆಪಿಯ ಬಿಎನ್‌ ಬಚ್ಚೇಗೌಡ 1.54 ಲಕ್ಷ ಮತಗಳ ಅಂತರದಲ್ಲಿ ಜಯ ಪಡೆದುಕೊಂಡಿದ್ದಾರೆ. ಕೊಪ್ಪಳದಲ್ಲಿ ಕರಡಿ ಸಂಗಣ್ಣ ಗೆಲುವು ಸಾಧಿಸಿದ್ದಾರೆ.

ಒಟ್ಟು 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 24, ಕಾಂಗ್ರೆಸ್‌ 2, ಜೆಡಿಎಸ್‌ 1, ಪಕ್ಷೇತರರು ಒಂದು ಕ್ಷೇತ್ರದಲ್ಲಿ ಮುಂದಿದ್ದಾರೆ.

Comments are closed.