ಬೆಂಗಳೂರಿನಲ್ಲಿ ಮಂಗಳವಾರದಿಂದ ಮಾವು ಹಲಸು ಮೇಳ ಆರಂಭವಾಗಿದೆ. ಹಣ್ಣಿನ ಪ್ರಿಯರಿಗೆ ಇಂದಿನಿಂದ ನಿಜದ ಹಬ್ಬ ಎಂದರೆ ತಪ್ಪಾಗಲಾರದು. ಆದರೆ ಇಲ್ಲೊಂದು ವಿಶಿಷ್ಟ ತಳಿಯ ಹಲಸಿನ ಹಣ್ಣು ಅಕ್ಷರಶಃ ಎಲ್ಲರ ಕಣ್ಣು ಕುಕ್ಕುವಂತೆ ಮಾಡುತ್ತಿದೆ. ಇದರ ಬೇಡಿಕೆ ಕೇಳಿಯೇ ಜನ ಹುಬ್ಬೇರಿಸುವಂತಾಗಿದೆ. ಅಲ್ಲದೆ ತೋಟಗಾರಿಕೆ ಕ್ಷೇತ್ರದಲ್ಲೊಂದು ಹೊಸ ಅಲೆಯನ್ನೇ ಸೃಷ್ಟಿಸಿರುವ ಈ ತಳಿ ರೈತನಿಗೆ ವಾರ್ಷಿಕ 1 ಕೋಟಿ ಲಾಭ ತಂದುಕೊಡುತ್ತಿದೆ ಎಂದರೆ ನೀವು ನಂಬುತ್ತೀರ? ಈ ಸ್ಟೋರಿಯನ್ನೊಮ್ಮೆ ಓದಿ!
ಅಂದಂಗೆ ಈ ತಳಿಯ ಹೆಸರು “ಸಿದ್ದು ಹಲಸಿನ ಹಣ್ಣು”. 36 ವರ್ಷದ ಈ ಮರ ಇರುವುದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೆಲೂರು ಎಂಬ ಗ್ರಾಮದಲ್ಲಿ. ಮಾಲೀಕ ಎಸ್.ಎಸ್. ಪರಮೇಶ ತನ್ನ ತಂದೆ ಎಸ್.ಕೆ. ಸಿದ್ದಪ್ಪ ಅವರ ಜ್ಞಾನಕಾರ್ಥವಾಗಿ ಈ ತಳಿಗೆ ‘ಸಿದ್ದು’ ಎಂದು ಹೆಸರಿಟ್ಟಿದ್ದಾರೆ. ಹೀಗಾಗಿ ಈ ತಳಿಯನ್ನು ಅವರ ಹೆಸರಿನಲ್ಲೇ ಕರೆಯಲಾಗುತ್ತದೆ. ಭಾರತದಲ್ಲಿ ಸುಮಾರು 137 ಕ್ಕೂ ಅಧಿಕ ವಿವಿಧ ತಳಿಯ ಹಲಸಿನ ಹಣ್ಣುಗಳ ಮರಗಳಿದ್ದು, ಈ ಎಲ್ಲಾ ಹಣ್ಣುಗಳ ಪೈಕಿ ಸಿದ್ದು ತಳಿಯ ಹಣ್ಣುಗಳನ್ನು ಶ್ರೇಷ್ಠ ಹಾಗೂ ವಿಶಿಷ್ಠ ಎಂದು ಪರಿಗಣಿಸಲಾಗಿದೆ.
ಎರಡು ವರ್ಷಗಳ ಹಿಂದೆ ಈ ಮರದ ಹಣ್ಣಗಳನ್ನು ಜೈವಿಕ ರಾಸಾಯನಿಕ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಉಳಿದ ಹಣ್ಣುಗಳಿಗೆ ಹೋಲಿಸಿಕೊಂಡರೆ ಅತಿ ಹೆಚ್ಚು ಪೌಷ್ಠಿಕಾಂಶವನ್ನು ಈ ಹಲಸು ಹೊಂದಿದೆ. ಗಾಢ ಕೆಂಪು ಬಣ್ಣದ ಈ ಹಣ್ಣಿನಲ್ಲಿ ವಿಟಮಿನ್-ಎ, ಲೈಕೋಸಿನ್-ಎ ಪೌಷ್ಠಿಕಾಂಶವೂ ಸಹ ಅತಿ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದು ಪ್ರಯೋಗಗಳಿಂದ ತಿಳಿದುಬಂದಿದೆ.
ಸರಿಸುಮಾರು 2.44 ಕೆ.ಜಿ ತೂಕವಿರುವ ಈ ಹಣ್ಣಿನ ಪ್ರತಿ 100 ಗ್ರಾಂ ಹಣ್ಣಿನಲ್ಲಿ 2 ಗ್ರಾಂ ನಷ್ಟು ಲೈಕೋಪಿನ್ ಅಂಶವನ್ನು ಪತ್ತೆಹಚ್ಚಲಾಗಿದೆ. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಲೈಕೋಸಿನ್ ಹೃದಯ ಸಂಬಂಧಿ ಖಾಯಿಲೆಗೆ ರಾಮಬಾಣವಾಗಿದ್ದು, ದೇಹದ ತೂಕ ಇಳಿಸಲು ಸಹ ಸಹಕಾರಿಯಾಗಿದೆ. ಅತಿಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ರಕ್ತ ಉತ್ಕರ್ಷಣ ನಿರೋಧಕ ಶಕ್ತಿಯೂ ಹೆಚ್ಚಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.
ಇದೇ ಕಾರಣಕ್ಕೆ ಈ ಮರ ಹಣ್ಣು ಹಾಗೂ ಈ ತಳಿ ಬೆಳೆಯಲು ಬೇಡಿಕೆಯೂ ಸಾಕಷ್ಟಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ತುಮಕೂರಿನ ತೋಟಗಾರಿಕಾ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ. ಕರುಣಾಕರನ್.
ರೈತರಿಂದ ಈ ತಳಿಗೆ ಹೆಚ್ಚಿದ ಬೇಡಿಕೆ; ಪ್ರತಿ ವರ್ಷದಿಂದ ವರ್ಷಕ್ಕೆ ಈ ತಳಿಯ ಸಸಿಗಳ ಬೇಡಿಕೆ ಹೆಚ್ಚುತ್ತಲೇ ಇದೆ. ವರ್ಷಕ್ಕೆ ಕಡಿಮೆ ಎಂದರೂ 1 ಲಕ್ಷ ಸಸಿಗಳ ಬೇಡಿಕೆ ಇದೆ. ಆದರೆ ನಮ್ಮಿಂದ 4,500ಕ್ಕಿಂತ ಹೆಚ್ಚು ಸಸಿಗಳನ್ನು ಪೂರೈಕೆ ಮಾಡಲಾಗುತ್ತಿಲ್ಲ ಎನ್ನುತ್ತಾರೆ ಡಾ.ಕರುಣಾಕರನ್.
ಪ್ರತಿ ಸಸಿಯನ್ನು 200 ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. ಖರ್ಚು 2 ಲಕ್ಷ ಕಳೆದರೂ 7 ಲಕ್ಷ ಲಾಭ ಉಳಿಯುತ್ತದೆ. ಈ ಪೈಕಿ ರಾಯಲ್ಟಿ ರೂಪದಲ್ಲೂ ನನಗೆ 4 ಲಕ್ಷ ಹಣ ಪ್ರತಿ ವರ್ಷ ಸಂದಾಯವಾಗುತ್ತಿದೆ ಎನ್ನುತ್ತಾರೆ ಮಾಲೀಕ ಪರಮೇಶ.
ಈ ತಳಿಯನ್ನು ಅಭಿವೃದ್ಧಿಪಡಿಸಲು ಆಸ್ಟ್ರೇಲಿಯಾ ಮೂಲದ ಕಂಪೆನಿ ಆಸಕ್ತಿ ವಹಿಸಿತ್ತು. ಆದರೆ, ಭಾರತೀಯ ತೋಟಗಾರಿಕಾ ಸಂಶೋಧನಾ ಸಮಿತಿ ನೀತಿ ಅನ್ವಯ ವಿದೇಶಗಳಿಗೆ ದೇಶಿ ತಳಿ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಲಾಗಿತ್ತು.
ಅಲ್ಲದೆ ಈ ನಿರ್ದಿಷ್ಟ ತಳಿಯನ್ನು ಅದರ ವೈವಿಧ್ಯಕ್ಕಾಗಿ 2017ರಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಇದೊಂದು ಅನುವಂಶೀಯ ವೈವಿಧ್ಯತೆಯ ಉಸ್ತುವಾರಿ ಎಂದು ನಾಮನಿರ್ದೇಶನ ಮಾಡಿದೆ. ಅಲ್ಲದೆ ಕಸಿ ಮಾಡುವ ಮೂಲಕ ಈ ತಳಿಯ ಅಭಿವೃದ್ಧಿಗೂ ಮುಂದಾಗಿದೆ.
Comments are closed.