ಬೆಂಗಳೂರು: ಈಗಾಗಲೇ ಆತ ಮೂರು ಮದುವೆಯಾಗಿ ಮತ್ತೊಮ್ಮೆ ಅದ್ಧೂರಿಯಾಗಿ ನಾಲ್ಕನೆ ಮದುವೆಯನ್ನೂ ಆಗಿದ್ದ. ಆದರೆ, ಫೇಸ್ಬುಕ್ನಲ್ಲಿ ಮದುವೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದ ನಂತರ ಆತನ ಮೋಸ ಬಯಲಾಗಿ, ಈಗ ಕಂಬಿ ಹಿಂದೆ ಸೇರಿದ್ದಾನೆ.
ತಮಿಳುನಾಡು ಮೂಲದ ಆರೋಪಿ ಅಮಾನುಲ್ಲಾ ಖಾನ್ ದುಬೈನಲ್ಲಿ ಶಿಕ್ಷಕ ವೃತ್ತಿ ಮಾಡಿಕೊಂಡಿದ್ದ. ಆಗಾಗ ಭಾರತಕ್ಕೆ ಬಂದು ವರದಕ್ಷಿಣೆ ಆಸೆಗೆ ಮದುವೆಯಾಗಿ ವಂಚಿಸಿ ವಾಪಸ್ ಹೋಗುತ್ತಿದ್ದ. ಇದೇ ರೀತಿ ಆತ ನಾಲ್ವರು ಮಹಿಳೆಯರನ್ನು ಮದುವೆಯಾಗಿ, ವಂಚನೆ ಎಸಗಿದ್ದಾನೆ.
ಇತ್ತೀಚೆಗೆ ಆರೋಪಿ ಅಮಾನುಲ್ಲಾ ಭಾರತಕ್ಕೆ ಬಂದಾಗ ಕೆ.ಜಿ ಹಳ್ಳಿ ನಿವಾಸಿಯೊಬ್ಬರ ಪುತ್ರಿಯನ್ನು ಮದುವೆಯಾಗಿದ್ದ. ಮೇ 23ರಂದು ಅದ್ದೂರಿಯಾಗಿ ಮದುವೆ ಕೂಡ ನೆರೆವೇರಿತ್ತು. ಮದುವೆಯ ಫೋಟೋಗಳನ್ನು ಫೇಸ್ಬುಕ್ನಲ್ಲಿ ಪೋಸ್ಟ್ನಲ್ಲಿ ಹಂಚಿಕೊಳ್ಳಲಾಗಿತ್ತು. ಈ ಫೋಟೋಗಳನ್ನು ನೋಡಿದ ಮೊದಲ ಹೆಂಡತಿಯರು, ಇತ್ತೀಚೆಗೆ ಮದುವೆಯಾದ ಯುವತಿಯ ಪೋಷಕರಿಗೆ ಕರೆ ಮಾಡಿ, ವಾಸ್ತವಾಂಶ ಬಿಚ್ಚಿಟ್ಟಿದ್ದಾರೆ. ಗಾಬರಿಗೊಂಡು ಪೋಷಕರು ಸಂಬಂಧಿಕರ ಮೂಲಕ ವಿಚಾರಿಸಿದಾಗ ಆರೋಪಿಯ ಬಣ್ಣ ಬಯಲಾಗಿದೆ. ಮೋಸ ಮಾಡಿದ ಅಮಾನುಲ್ಲಾ ಖಾನ್ ವಿರುದ್ಧ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ತಮಿಳುನಾಡಿಗೆ ಪರಾರಿಯಾಗಲು ಪ್ರಯತ್ನಿಸಿದ ಆರೋಪಿ ಅಮಾನುಲ್ಲಾ ಬಾಷಾ, ಆತನ ತಂದೆ ಬಾಷಾ ಹಾಗೂ ಸಂಬಂಧಿ ಝಾಕೀರ್ ಹುಸೇನ್ ನನ್ನು ಪೊಲೀಸರು ಬಂಧಿಸಿದ್ದಾರೆ.
Comments are closed.