ಕರ್ನಾಟಕ

ನೀರಿನ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಿದ ಕುಮಾರಸ್ವಾಮಿಗೆ ಕೃತಜ್ಞತಾ ಪತ್ರ ಬರೆದ ವೀರೇಂದ್ರ ಹೆಗ್ಗಡೆ

Pinterest LinkedIn Tumblr


ಬೆಂಗಳೂರು: ಧರ್ಮಸ್ಥಳದಲ್ಲಿ ತಲೆದೋರಿದ್ದ ನೀರಿನ ಸಮಸ್ಯೆಗೆ ಸರ್ಕಾರ ತತ್​ಕ್ಷಣದ ಕ್ರಮ ತೆಗೆದುಕೊಳ್ಳುವಂತೆ ಸ್ಪಂದಿಸಿದ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪತ್ರ ಬರೆದು ಕೃತಜ್ಞತೆ ತಿಳಿಸಿದ್ದಾರೆ.

“ನೇತ್ರಾವತಿ ನದಿ ಮತ್ತು ನೆರೆಯ ನದಿಗೆ 2 ಕಿಂಡಿ ಅಣೆಕಟ್ಟು ನಿರ್ಮಿಸಲು 7 ಕೋಟಿ ಮಂಜೂರು ಮಾಡಿದ್ದು ಸಂತೋಷವಾಗಿದೆ. ಮಂಜುನಾಥ ಸ್ವಾಮಿ ದೀರ್ಘಾಯುರಾರೋಗ್ಯ ಸಕಲ ಸನ್ಮಂಗಲವನ್ನುಂಟು ಮಾಡಲಿ. ಹಾಗೂ ನಿಮ್ಮ ದಕ್ಷ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸುವಂತೆ ಹರಸಲೆಂದು ಪ್ರಾರ್ಥನೆ ಸಲ್ಲಿಸುತ್ತೇನೆ,” ಎಂದು ಸಿಎಂಗೆ ವೀರೇಂದ್ರ ಹೆಗ್ಗಡೆ ಪತ್ರ ಬರೆದಿದ್ದಾರೆ. ಅಲ್ಲದೆ ರಾಜ್ಯದ ಜನರು ಸಹ ಧರ್ಮಸ್ಥಳದ ನೀರಿನ ಅಭಾವ ಅರಿತು ಸಹಾಯ ಮಾಡಿದ್ದಾರೆ. ಸರ್ಕಾರ ಹಾಗೂ ರಾಜ್ಯದ ಜನರಿಗೆ ಎಲ್ಲಾ ಭಕ್ತಾದಿಗಳಿಗೂ ಅವರು ಕೃತಜ್ಞತೆ ಹೇಳಿದ್ದಾರೆ.

ಸುಮಾರು ಹತ್ತು ದಿನಗಳ ಹಿಂದೆ ನೇತ್ರಾವತಿ ನದಿಯಲ್ಲಿ ನೀರಿನ ಅಭಾವ ತಲೆದೋರಿರುವ ಕಾರಣಕ್ಕೆ ಭಕ್ತಾದಿಗಳು ಧರ್ಮಸ್ಥಳ ಪ್ರವಾಸವನ್ನು ಮುಂದೂಡಬೇಕು ಎಂದು ಮನವಿ ಮಾಡಿ ವೀರೇಂದ್ರ ಹೆಗ್ಗಡೆ ಅವರು ಪತ್ರ ಬರೆದಿದ್ದರು. ಈ ಪತ್ರ ಮಾಧ್ಯಮಗಳಲ್ಲಿ ವರದಿಯಾದ ಕೂಡಲೇ ಎಚ್ಚೆತ್ತ ಕುಮಾರಸ್ವಾಮಿ ಅವರು ವಿಶೇಷ ಮುತುವರ್ಜಿ ವಹಿಸಿ, ಕೂಡಲೇ ಮುಖ್ಯಕಾರ್ಯದರ್ಶಿ ಅವರ ಮೂಲಕ ನೀರಿನ ಸಮಸ್ಯೆ ಪರಿಹಾರ ಕಾರ್ಯಕ್ಕೆ ಸ್ಪಂದಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿಗಳು ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದರು.

Comments are closed.