ಕರ್ನಾಟಕ

ಐಎಂಎ ಜ್ಯುವೆಲ್ಸ್ ಬಹುಕೋಟಿ ವಂಚನೆ ಪ್ರಕರಣ; ಎಸ್ಐಟಿ ತನಿಖೆಗೆ ಹಸ್ತಾಂತರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು: ಹೂಡಿಕೆಯ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚಿಸಿರುವ ಐಎಂಎ ಜ್ಯುವೆಲ್ಲರ್ಸ್ ಮಾಲೀಕನ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣವನ್ನು ಸಿಸಿಬಿ ಬದಲಿಗೆ ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ಹಸ್ತಾಂತರಿಸಿರುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳ ಕಚೇರಿ, ಐಎಂಎ ವಂಚನೆ ಪ್ರಕರಣದ ಗಂಭೀರತೆಯನ್ನುಅರಿತು ಪ್ರಕರಣವನ್ನು ಎಸ್ ಐಟಿ ತನಿಖೆಗೆ ಹಸ್ತಾಂತರಿಸಲಾಗಿದೆ ಮತ್ತು ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಸಿಎಂ ಕುಮಾರಸ್ವಾಮಿ ಅವರು ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿದ್ದರು. ಆದರೆ, ಸಚಿವ ಜಮೀರ್​ ಅಹಮದ್ ಖಾನ್, ಶಾಸಕರಾದ ಎನ್.ಎ. ಹ್ಯಾರೀಸ್, ರಿಜ್ವಾನ್ ಅರ್ಷದ್, ನಜೀರ್ ಅಹಮದ್ ಮತ್ತು ಅಬ್ದುಲ್ ಜಬ್ಬಾರ್ ಅವರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಬಹುಕೋಟಿ ವಂಚನೆ ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು. ನಂತರ ಪ್ರಕರಣದ ಗಂಭೀರತೆ ಅರಿತು ಎಸ್​ಐಟಿ ತನಿಖೆಗೆ ವಹಿಸಲಾಗಿದೆ.

ಐಎಂಎ ಮಾಲೀಕ ಮುಹಮ್ಮದ್ ಮನ್ಸೂರ್ ಖಾನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಆಡೀಯೋವೊಂದನ್ನು ಅಜ್ಞಾತಸ್ಥಳದಿಂದ ಕಳುಹಿಸಿ ನಾಪತ್ತೆಯಾಗಿದ್ದಾರೆ.

ಐಎಂಎ ಸಂಸ್ಥೆ ಚಿನ್ನಾಭರಣ, ಔಷಧ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವ್ಯವಹಾರಗಳನ್ನು ಮಾಡುತ್ತಿದ್ದು, ಇದೀಗ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಮಂದಿ ಸಂಕಷ್ಟ ಅನುಭವಿಸುವಂತಾಗಿದೆ.

ಇನ್ನು ನಿಗೂಢವಾಗಿ ನಾಪತ್ತೆಯಾಗಿರುವ ಮನ್ಸೂರ್‌ ಖಾನ್‌ ಪತ್ತೆಗಾಗಿ ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿದೆ.

Comments are closed.