ಬೆಂಗಳೂರು: ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ತಾನು ಬೆಂಗಳೂರಲ್ಲಿ ಜೀವಂತ ಇರುವುದಾಗಿ ಹೇಳಿಕೆ ನೀಡಿ ಮನ್ಸೂರ್ ಖಾನ್ ಹೊಸ ಆಡಿಯೊ ಬಿಡುಗಡೆ ಮಾಡಿದ್ದಾರೆ.
ಹೊಸ ಆಡಿಯೊ ಬಿಡುಗಡೆ ಮಾಡಿದ ಮನ್ಸೂರ್ ಖಾನ್, ”ನನ್ನ ಹಿಂದೆ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ, ನಾನು ಸಾಯುವುದಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಾನು ಹಾಗೂ ನನ್ನ ಕುಟುಂಬ ಎಲ್ಲಿಯೂ ಓಡಿ ಹೋಗಿಲ್ಲ. ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸಲಾಗುತ್ತಿದೆ” ಎಂದು ಆಡಿಯೋ ಟೇಪ್‌ನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ, ”ನಾನು ತೆಗೆದುಕೊಂಡಿರುವ ನ್ಯಾಯವಾದ ದುಡ್ಡು ಎಲ್ಲರಿಗೂ ವಾಪಸ್ ಸಿಗಲಿದೆ. ಶಾಸಕ ರೋಷನ್ ಬೇಗ್, ಶಕೀಲ್ ಅಹಮದ್ ಹಾಗೂ ರಾಹೀಲ್ ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸುತ್ತಿದ್ದಾರೆ. ಹೂಡಿಕೆ ಮಾಡಲಾಗಿರುವ ಎಲ್ಲ ಹಣವನ್ನು ನಾನು ಆಭರಣ, ವಜ್ರ, ಆಸ್ಪತ್ರೆ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಜತೆಗೆ, ”ನನ್ನ ವಿರುದ್ಧದ ಆರೋಪದಲ್ಲಿ ದೊಡ್ಡ ದೊಡ್ಡವರ ಕೈವಾಡ ಇದೆ. ರಾಹೀಲ್ ಕೈಯಲ್ಲಿ ನನ್ನ ಎಲ್ಲ ಆಭರಣ ಹಾಗೂ ವಜ್ರ ಕೊಟ್ಟಿದ್ದೇನೆ. ಇಂದು ಸಂಜೆ ಸಮದ್ ಹಾಲ್ ನಲ್ಲಿ ಮೀಟಿಂಗ್ ಕರೆದಿದ್ದೇನೆ. ರಾಹೀಲ್ ಸೇರಿ ಎಲ್ಲರ ಜತೆ ಮಾತನಾಡಿ, ನಂತರ 15ನೆ ತಾರೀಕಿಗೆ ಎಲ್ಲರ ಹಣ ವಾಪಸ್ ಮಾಡುತ್ತೇನೆ. ಮೊದಲು ಕಡಿಮೆ ಮೊತ್ತದವರಿಗೆ, ನಂತರ ಮಧ್ಯಮ, ತದನಂತರ ದೊಡ್ಡ ಮೊತ್ತದವರಿಗೆ ಪಾವತಿಸುತ್ತೇನೆ” ಎಂದು ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ಹೊಸ ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ.
Comments are closed.