ಕರ್ನಾಟಕ

ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ: ಮೋದಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಭಾವನೆಗಳಿಗೆ ಒಳಗಾಗಿ ಮತನೀಡಿದರೆ ದೇಶ ದಿವಾಳಿ ಹಂತ ತಲುಪುತ್ತದೆ ಎಂದು ಮಾಜಿ ಸಿಎಂ ಹಾಗೂ ಹಾಲಿ ದೋಸ್ತಿ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಹೇಳಿದ್ದಾರೆ.

ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರು ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಕುರಿತು ಬಹಿರಂಗ ವಾಗ್ದಾಳಿ ಆರಂಭಿಸಿದ ಬೆನ್ನಲ್ಲೇ ಇತ್ತ ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಕೂಡ ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ದೇಶದ ಜಿಡಿಪಿ ಕಳೆದ 5 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿದಿದೆ, ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತಿ ಗರಿಷ್ಟ ಮಟ್ಟ ತಲುಪಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭಾವನೆಗಳಿಗೆ ಒಳಗಾಗಿ ಮತ ನೀಡಿದರೆ ದೇಶ ದಿವಾಳಿ ಹಂತ ತಲುಪುತ್ತದೆ ಎಂಬುದಕ್ಕೆ ಇದೇ ಸ್ಪಷ್ಟ ಉದಾಹರಣೆ ಎಂದು ಟೀಕಿಸಿದ್ದಾರೆ.

ಅಂತೆಯೇ ‘ರೈತರ, ಬಡವರ, ಸೈನಿಕರ ಕಷ್ಟದ ಬಗ್ಗೆ ಮಾತನಾಡಿದರೆ ನಮ್ಮನ್ನು ದೇಶದ್ರೋಹಿ ಎನ್ನುತ್ತಾರೆ. ಈ ರೈತರು, ಬಡವರು, ದಲಿತರು, ಸೈನಿಕರು ಇವರೆಲ್ಲ ಅನ್ಯಗ್ರಹ ಜೀವಿಗಳೇ? ಇವರ ಸಮಸ್ಯೆ ಬಗ್ಗೆ ಪ್ರಶ್ನಿಸಬಾರದೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಪ್ರಶ್ನಿಸುವವರನ್ನೆಲ್ಲ ದೇಶದ್ರೋಹಿ ಎನ್ನುವುದು ತಪ್ಪು. ಪುಲ್ವಾಮ ದಾಳಿಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ ಕಾರಣ. ದೇಶದ ಸಾವಿರಾರು ಸೈನಿಕರನ್ನು ಸ್ಥಳಾಂತರಿಸುವಾಗ ಕನಿಷ್ಟ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಸರ್ಕಾರದ ತಪ್ಪು. ಇದನ್ನ ಪ್ರಶ್ನಿಸಬೇಕಾಗಿದ್ದ ಮಾಧ್ಯಮಗಳು ಕೂಡ ಜಾಣ ಕುರುಡು ಪ್ರದರ್ಶಿಸಿದವು. ಪುಲ್ವಾಮ ದುರಂತದಲ್ಲಿ ಮಡಿದ ನಮ್ಮ ಸೈನಿಕರ ಸಾವಿಗೆ ಮೋದಿಯವರೇ ನೇರಹೊಣೆ. ಬಾಲಾಕೋಟ್ ದಾಳಿಯಲ್ಲಿ ಸತ್ತ ಭಯೋತ್ಪಾದಕರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಇದುವರೆಗೂ ದೊರೆತಿಲ್ಲ. ಬರೀ ಅಂತೆ ಕಂತೆಗಳನ್ನೇ ತೋರಿಸಿ ಚುನಾವಣೆ ಗೆದ್ದು ಅವರು ಅಧಿಕಾರ ಹಿಡಿದಿದ್ದಾರೆ. ಮೋದಿಯವರು ಪ್ರಧಾನಿ ಆಗಿರುವುದರಿಂದ ಯಾರಿಗೆ ಸಂತೋಷವಾಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಆಸೆ ಮಾತ್ರ ಈಡೇರಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಐಎಂಎ ವಂಚನೆ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಐಎಂಎ ವಂಚನೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ನೀಡಿದೆ. ಎಸ್‌ಐಟಿ ತಂಡ ಸೂಕ್ತ ಮತ್ತು ಪಾರದರ್ಶಕ ತನಿಖೆ ನಡೆಸಿ ಸತ್ಯವನ್ನು ಹೊರತರಲಿದೆ ಎಂಬ ಭರವಸೆಯಿದೆ. ಇದು ತಮ್ಮ ವಿರುದ್ಧ ರೂಪಿಸಿದ ಷಡ್ಯಂತ್ರ ಎಂದು ಹೇಳುವವರು ಎಸ್‌ಐಟಿ ತಂಡದ ಎದುರು ಹೋಗಿ ತಮ್ಮ ಅನುಮಾನ ಹೇಳಿಕೊಳ್ಳಲಿ” ಎಂದು ಅವರು ಸಲಹೆ ನೀಡಿದ್ದಾರೆ.

Comments are closed.