ಕರ್ನಾಟಕ

‘ಕೋ-ಜಾ’ ಎಂದು ಲೇವಡಿ ಮಾಡಿದ ಶೋಭಾ ಕರಂದ್ಲಾಜೆಗೆ ಸಿದ್ದರಾಮಯ್ಯ ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ಜಿಂದಾಲ್ ಗೆ ಭೂಮಿ ಮಾರಾಟ ಮಾಡುವ ಮೈತ್ರಿ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಟ್ವಿಟರ್ ನಲ್ಲಿ `ಕೋ-ಜಾ’ ಸಮರ ನಡೆದಿದೆ.

ಶೋಭಾ ಕರಂದ್ಲಾಜೆ ಅವರು ಟ್ವಿಟರ್ ನಲ್ಲಿ ರಾಜ್ಯ ಸರ್ಕಾರವನ್ನು ಉದ್ದೇಶಿಸಿ ಬಳಸಿದ `ಕೋ-ಜಾ’ಪದಕ್ಕೆ ಮಾಜಿ ಸಿಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಿರ್ಲಕ್ಷಿತ ಸಮುದಾಯಗಳಿಗೆ ನೋವಾಗುವ ಮಾತನಗಳನ್ನಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಜಿಂದಾಲ್ ಗೆ ಭೂಮಿ ಮಾರಾಟ ವಿರೋಧಿಸಿ ಬಿಜೆಪಿಯ ಅಹೋರಾತ್ರಿ ಪ್ರತಿಭಟನೆಯ ವೇಳೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯನವರೆ ಮತ್ತು ಕುಮಾರಸ್ವಾಮಿ ಅವರೇ ಈ ಒಪ್ಪಂದದ ಕುರಿತು ನಿಮ್ಮ ಮೌನದ ಹಿಂದಿನ ಕಾರಣವನ್ನು ರಾಜ್ಯದ ಜನ ತಿಳಿಯಲು ಬಯಸಿದ್ದಾರೆ ಎಂದು ನಂತರ ಟ್ವಿಟ್ ಮಾಡಿದ್ದರು.

`ಕೋ-ಜಾ’ ಸರ್ಕಾರ ಜಿಂದಾಲ್‍ಗೆ ಪುಡಿಗಾಸಿಗೆ ಬೆಲೆ ಬಾಳುವ ಭೂಮಿ ಮಾರಾಟ ಮಾಡುತ್ತಿದೆ. ಈ ಕುರಿತು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮೌನ ವಹಿಸಿದ್ದಾರೆ. ನಿಮ್ಮ ಮೌನ ಯಾಕೆ ಅಂತ ರಾಜ್ಯ ಕೇಳುತ್ತಿದೆ ಎಂದು ಅಣಕವಾಡಿದ್ದರು. ಅಲ್ಲದೆ #CoJaJindalNexus! ಎಂಬ ಹ್ಯಾಶ್‌ ಟ್ಯಾಗ್‌ ಅನ್ನೂ ಬಳಸಿದ್ದರು.

ಶೋಭಾ ಅವರ ಕೋ-ಜಾ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಿಎಂ, ಕುಮಾರಿ ಶೋಭಾ ಕರಂದ್ಲಾಜೆ ಅವರೆ, ವಾಕ್ಚಾತುರ್ಯವನ್ನು ಪ್ರದರ್ಶಿಸುವುದಷ್ಟೆ ನಿಮ್ಮ ಉದ್ದೇಶವಾಗಿದ್ದರೆ ಮೈತ್ರಿ ಎಂಬ ಪದ ಬಳಸಬಹುದಿತ್ತು. ಬೇಸರಗೊಳ್ಳಬೇಡಿ, ಸಮಾಜದಲ್ಲಿ ಈಗಾಗಲೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯವನ್ನು ಅಸಾಂವಿಧಾನಿಕ ಮಾತುಗಳ ಮೂಲಕ ನೋಯಿಸಬೇಡಿ ಎಂದು ಸಿದ್ದರಾಮಯ್ಯ ಅವರು ಟ್ವಿಟ್ ಮಾಡಿದ್ದಾರೆ.

Comments are closed.