ಕರ್ನಾಟಕ

ತುಮಕೂರಿನಲ್ಲಿ ನನ್ನ ಸೋಲಿಗೆ ಯಾರನ್ನು ಹೊಣೆ ಮಾಡೋದಿಲ್ಲ, ಯಾರನ್ನು ಟಾರ್ಗೆಟ್​ ಮಾಡೋದು ಸರಿಯಲ್ಲ: ದೇವೇಗೌಡ

Pinterest LinkedIn Tumblr

ಬೆಂಗಳೂರು: “ಜೆಡಿಎಸ್​​ ರಾಜ್ಯಾಧ್ಯಕ್ಷ ಸ್ಥಾನದಲ್ಲಿಎಚ್ ವಿಶ್ವನಾಥ್ ಅವರೇ ಮುಂದುವರೆಯುತ್ತಾರೆ. ಇವರನ್ನು ಬಿಟ್ಟು ಬೇರೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡುವ ಪ್ರಶ್ನೆಯೇ ಇಲ್ಲ. ಅವರು ಬರುವ ತನಕ ಸ್ಥಾನ ಹಾಗೆಯೇ ಖಾಲಿ ಇರುತ್ತೇ. ಸಚಿವ ಸ್ಥಾನ ಬೇಕೆಂದು ಅವರು ಕೇಳಿಲ್ಲ. ಮೈಸೂರು ಜಿಲ್ಲಾ ರಾಜಕಾರಣದಲ್ಲಿ ಎಚ್ ವಿಶ್ವನಾಥ್ ಅವರಿಗೆ ಬೇಸರವಾಗಿರೋದು ನಿಜ. ಸದ್ಯದಲ್ಲೇ ಅವರ ಮನವೊಲಿಸುತ್ತೇವೆ” ಎಂದು ಮಾಜಿ ಪ್ರಧಾನಿ ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ನಿಖಿಲ್​​ ಅವರನ್ನು ಕಣಕ್ಕಿಳಿಸುವ ಉದ್ದೇಶ ಇರಲಿಲ್ಲ. ಆದರೆ, ಮಂಡ್ಯದ ಜೆಡಿಎಸ್​​ ಮುಖಂಡರೇ ನಿಲ್ಲಿಸುವಂತೆ ನಮಗೆ ಒತ್ತಾಯಿಸಿದ್ದರು. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಣಕ್ಕಿಳಿಸಬೇಕಾಯ್ತು ಎಂದು ನಿಖಿಲ್​​​ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.

ಹೀಗೆಯೇ ಮಾತು ಮುಂದುವರೆಸಿದ ದೊಡ್ಡಗೌಡರು, ನಿಖಿಲ್ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದರು. ಮಂಡ್ಯದ ಚುನಾವಣೆಯಲ್ಲಿ ಸೋತರೂ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ರಾಜಕೀಯದಲ್ಲಿಯೇ ಇದ್ದು ಹೋರಾಟ ಮಾಡುವ ಸ್ವಭಾವ ಇದೆ. ಸಿನಿಮಾ ಕ್ಷೇತ್ರಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.

ಇನ್ನು ಪ್ರಜ್ವಲ್ ರೇವಣ್ಣಗೆ ಹಾಸನ ಕ್ಷೇತ್ರ ಬಿಟ್ಟುಕೊಡೋದಾಗಿ ಮೊದಲೇ ಹೇಳಿದ್ದೆ. ತುಮಕೂರಿನಲ್ಲಿ ನನ್ನ ಸೋಲಿಗೆ ಯಾರನ್ನು ಹೊಣೆ ಮಾಡೋದಿಲ್ಲ. ಯಾರನ್ನು ಟಾರ್ಗೆಟ್​ ಮಾಡೋದು ಸರಿಯಲ್ಲ. ಸೋತ ಬಗ್ಗೆ ಚರ್ಚೆ ಬೇಡ, ನಾನೀಗ ಪಕ್ಷ ಸಂಘಟನೆ ಮಾಡ್ತಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ಸಿಎಂ ಎಚ್​​.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನ್ನ ಮಗ ಇಡೀ‌ ದಿನ ಜನರ ಸಮಸ್ಯೆ ಆಲಿಸುತ್ತಾರೆ. ಅಧಿಕಾರಿಗಳು ಕೂಡ ಈ ಬಾರಿ ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸುತ್ತಾರೆ. ಬೆಳಗ್ಗೆ 10 ಗಂಟೆಯಿಂದಲೇ ಗ್ರಾಮ ವಾಸ್ತವ್ಯ ಪ್ರಾರಂಭ ಆಗುತ್ತೆ. ಜನರ ಸಮಸ್ಯೆ ಆಲಿಸಿದ ಬಳಿಕ ಸಿಎಂ, ಸಂಜೆ ಒಂದು ಶಾಲೆಯಲ್ಲಿ ವಾಸ್ತವ್ಯ ಮಾಡುತ್ತಾರೆ ಎಂದು ಹೇಳಿದರು.

ಹಾಗೆಯೇ ಎಂದಿನಂತೆ ಮಾಧ್ಯಮಗಳ ಮೇಲೆ‌ ಸಿಎಂಗೆ ಸ್ವಲ್ಪ‌ ಕೋಪ ಇದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ. ಗ್ರಾಮ ವಾಸ್ತವ್ಯ ಮಾಡ್ತಿದ್ದಾರೆ, ಅಲ್ಲಿಯೇ ನಿಮ್ಮ ಜೊತೆಗೆ ಮಾತಾಡುತ್ತಾರೆ. ಸರ್ಕಾರ ರಚನೆ ಆದಾಗಿನಿಂದಲೂ ಅವರಿಗೆ ಮಾಧ್ಯಮಗಳು ಬೆಂಬಲ ಕೊಡಲಿಲ್ಲ ಅನ್ನೋ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.

Comments are closed.