ಬೆಂಗಳೂರು: ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ನೀಡುತ್ತಿರುವುದನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ನಾಯಕರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಸಿಎಂ ಗೃಹಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಬಿಜೆಪಿ ಮುಖಂಡರನ್ನು ಚಿತ್ರಕಲಾ ಪರಿಷತ್ ಬಳಿ ಬ್ಯಾರಿಕೇಡ್ ಹಾಕಿ ವಶಕ್ಕೆ ಪಡೆಯಲಾಗಿದೆ. ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ್, ಸಿ.ಟಿ. ರವಿ, ಅರವಿಂದ್ ಲಿಂಬಾವಳಿ, ರೇಣುಕಾಚಾರ್ಯ, ಸುರೇಶ್ ಕುಮಾರ್ ಸೇರಿದಂತೆ ಹಲವು ನಾಯಕರನ್ನು ಬಂಧಿಸಿ, ಕಬ್ಬನ್ ಪಾರ್ಕ್ ಠಾಣೆಗೆ ಕರೆತಂದಿದ್ದಾರೆ.
ಬಂಧನಕ್ಕೂ ಮುನ್ನ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು. “ಜಿಂದಾಲ್ ಪ್ರಕರಣದಲ್ಲಿ ಭೂಮಿ ಮಾರಾಟವಾಗಬಾರದು. ಸರ್ಕಾರ ಜನರ ಕಣ್ಣಿಗೆ ಮಣ್ಣು ಎರಚಲು ಹೊರಟಿದೆ. ಸಿಎಂ ಕುಮಾರಸ್ವಾಮಿ ಜೊತೆ ಮಾತನಾಡೋದು ಏನಿದೆ? ಸಿಎಂ ಕುಮಾರಸ್ವಾಮಿ ವಿರುದ್ಧ ನಮ್ಮ ಹೋರಾಟ ಅಲ್ಲ. ಜನರ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವಾಗಿದೆ. ಜಿಂದಾಲ್ ಕಂಪನಿಯಲ್ಲಿ ಕನ್ನಡಿಗರಿಗೆ ಹುದ್ದೆ ಸಿಕ್ಕಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ಎರಡು ದಿನದಿಂದ ಅಹೋರಾತ್ರಿ ಧರಣಿ ನಡೆಸಿದ್ದೇವೆ. ಸಿಎಂ ಗೃಹ ಕಚೇರಿ ಕೃಷ್ಣಾಗೆ ಮೆರವಣಿಗೆ ಮೂಲಕ ಮುತ್ತಿಗೆ ಹಾಕುತ್ತೇವೆ. ಮುತ್ತಿಗೆ ವೇಳೆ ಅಹಿತಕರ ಘಟನೆ ನಡೆಯದಂತೆ ಪ್ರತಿಭಟನೆ ಮಾಡುತ್ತೇವೆ. ಇನ್ಮುಂದೆ ಮೈತ್ರಿ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ. ವಿಪಕ್ಷವಾಗಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬೇಕು. ಲೋಕಾ ಚುನಾವಣೆ ಬಳಿಕ ಸಿಎಂ ರಾಜೀನಾಮೆ ನೀಡಬೇಕಿತ್ತು. ಆದರೆ ಸಿಎಂ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ. ರಾಜ್ಯದಲ್ಲಿನ ಬರದ ಬಗ್ಗೆ ಮೈತ್ರಿ ಸರ್ಕಾರ ಸ್ಪಂದಿಸುತ್ತಿಲ್ಲ,” ಎಂದು ಕಿಡಿಕಾರಿದರು.
“ಹಿರಿಯ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ. ಕೆರೆ-ಕಟ್ಟೆ ಗಳ ಹೂಳು ಎತ್ತಬೇಕಾಗಿತ್ತು, ಆದರೆ ಅದು ಸರ್ಕಾರದಿಂದ ಆಗಲಿಲ್ಲ. ಮಾಧ್ಯಮಗಳು ನಮ್ಮ ತಪ್ಪನ್ನು ಎತ್ತಿ ತೋರಿಸುತ್ತವೆ. ಅದು ಪತ್ರಿಕಾಮಿತ್ರರ ಜವಾಬ್ದಾರಿ. ಅದನ್ನು ನಾವು ಅರ್ಥ ಮಾಡಿಕೊಂಡು ಸರಿಪಡಿಸಿಕೊಳ್ಳಬೇಕು. ಅದು ಬಿಟ್ಟು ಮಾಧ್ಯಮಗಳ ಮೇಲೆ ಹರಿಹಾಯುವುದಲ್ಲ,” ಎಂದು ಮಾಧ್ಯಮಗಳಿಗೆ ಬೆಂಬಲ ನೀಡಿದರು.
Comments are closed.