ಸಾವಿರಾರು ಹೂಡಿಕೆದಾರರಿಗೆ ಟೋಪಿ ಹಾಕಿರುವ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ ತನಿಖೆ ತೀವ್ರಗೊಳಿಸಿದೆ.
ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಹೆಸರು ಕೇಳಿಬಂದಿದ್ದು, ಆ ಬಗ್ಗೆಯೂ ಸಮಗ್ರವಾಗಿ ತನಿಖೆ ನಡೆಸಲಾಗ್ತಿದೆ. ವಂಚಕ ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದಾರೆ ಎನ್ನಲಾದ ಆಡಿಯೊದಲ್ಲಿ ರೋಷನ್ ಬೇಗ್ ಹೆಸರು ಪ್ರಸ್ತಾರವಾಗಿದೆ. ಆಡಿಯೋ ಯಾರದ್ದು ಅಂತ ಇನ್ನೂ ಎಸ್‌ಐಟಿಗೆ ಧೃಡವಾಗಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಆಡಿಯೋ ಕ್ಲಿಪ್ ಕಳುಹಿಸಲಾಗಿದೆ. ಆಡಿಯೋದಲ್ಲಿರುವ ಧ್ವನಿ ಒಬ್ಬರದ್ದೇ ಆಗಿದ್ದಲ್ಲಿ ರೋಷನ್ ಬೇಗ್ ವಿಚಾರಣೆ ಖಚಿತ. ಹೀಗಾಗಿ, ಎಫ್‌ಎಸ್‌ಎಲ್ ವರದಿಗಾಗಿ ಎಸ್‌ಐಟಿ ಅಧಿಕಾರಿಗಳು ಕಾಯ್ತಿದ್ದಾರೆ.
ಶಾಸಕ ರೋಷನ್ ಬೇಗ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅವರ ನಿವಾಸದ ಮುಂದೆ ವಿಕೆಓ ಶಾಲೆಯ ಪೋಷಕರು ಮತ್ತು ವಿಧ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು. ಐಎಂಎ ವತಿಯಿಂದ ವಿಕೆಓ ಶಾಲೆಗೆ ಧನಸಹಾಯ ನೀಡಲಾಗ್ತಿತ್ತು. ಇದರಿಂದ ಶಾಲೆಗೆ ಹೆಚ್ಚುವರಿಯಾಗಿ ಶಿಕ್ಷಕರ ನೇಮಕ ಮಾಡಲಾಗಿತ್ತು. ಆದರೆ, ವಂಚನೆ ಬಯಲಾಗ್ತಿದಂತೆ ಆ ಶಿಕ್ಷಕರನ್ನು ಶಾಲೆಯಿಂದ ತೆಗೆದು ಹಾಕಲಾಗಿದೆ. ಹೀಗಾಗಿ, ಐಎಂಎ ನೇಮಕ ಮಾಡಿದ್ದ ಶಿಕ್ಷಕರನ್ನು ವಾಪಸ್ ಕರೆಸಿ ಅಂತ ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
IMA ಪ್ರಕರಣದಿಂದಾಗಿಯೇ ರೋಷನ್ ಬೇಗ್ ಅವರನ್ನ ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದ್ರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಎಂ.ಬಿ.ಪಾಟೀಲ್, ಐಎಂಎ ಪ್ರಕರಣಕ್ಕೂ ಅಮಾನತಿಗೂ ಸಂಬಂಧ ಇಲ್ಲ ಎಂದಿದ್ದಾರೆ. ಎಸ್‌ಐಟಿ ಉತ್ತಮವಾಗಿ ಕೆಲಸ ಮಾಡ್ತಿದೆ. ಮನ್ಸೂರ್ ಬಂಧನಕ್ಕೆ ಮುಖ್ಯ ಆದ್ಯತೆ ನೀಡಿದ್ದೇವೆ. ತನಿಖೆ ನಡಿತಿದೆ. ಆತ ಎಲ್ಲಿದ್ದಾನೆ ಅಂತ ಹೇಳಲ್ಲ ಎಂದಿದ್ದಾರೆ.
ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿಬಂದಿರೋದ್ರಿಂದ ಎಸ್‌ಐಟಿ ಬದಲು ಸಿಬಿಐ ತನಿಖೆಯೇ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಈ ಮಧ್ಯೆ, ಐಎಂಎ ವಂಚನೆ ವಿರುದ್ಧ ಬರುತ್ತಿರುವ ದೂರುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ೯ ದಿನಗಳಲ್ಲಿ ಇಲ್ಲಿವರೆಗೆ ೪೨ ಸಾವಿರ ದೂರುಗಳು ಬಂದಿವೆ. ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಯಿಂದ ಹೂಡಿಕೆದಾರರು ಆಗಮಿಸಿ ಪೊಲೀಸರಿಗೆ ದೂರು ನೀಡ್ತಿದ್ದಾರೆ. ಅಂದಾಜು ೬೦ ಸಾವಿರ ಜನರು ಐಎಂಎ ಕಂಪೆನಿಯಲ್ಲಿ ಹೂಡಿಕೆ ಮಾಡಿರುವ ಸಾಧ್ಯತೆ. ಹೀಗಾಗಿ, ದೂರುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.
ಈ ನಡುವೆ, ವಂಚಕ ಮನ್ಸೂರ್ ಖಾನ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಚಿನ್ನದ ವ್ಯಾಪಾರಿ ಅಂಕಿತ್ ಸಾಂಘ್ವಿ ಎಂಬುವರಿಂದ ಸುಮಾರು 9 ಕೋಟಿ 80 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿದ್ದ ಮನ್ಸೂರ್, ಕಂಪನಿ ಹೆಸರಲ್ಲಿ ಚೆಕ್ ನೀಡಿ, ನಾಳೆ ಡ್ರಾ ಮಾಡ್ಕೋ ಅಂತ ಹೇಳಿದ್ದ. ಆದ್ರೆ, ಹಣ ಡ್ರಾ ಮಾಡಿಕೊಳ್ಳೋ ಹಿಂದಿನ ದಿನವೇ ಕುಟುಂಬ ಸಮೇತ ಖಾನ್ ಪರಾರಿಯಾಗಿದ್ದಾನೆ. ಇದರಿಂದ ಕಂಗಲಾದ ಚಿನ್ನದ ವ್ಯಾಪಾರಿ ಅಂಕಿತ್ ಸಾಂಘ್ವಿ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಲ್ಲಿವರೆಗೆ ಈ ಠಾಣೆಯೊಂದರಲ್ಲೇ ಮನ್ಸೂರ್ ವಿರುದ್ಧ ಒಟ್ಟು 6 ಎಫ್‌ಐಆರ್ ದಾಖಲಾಗಿವೆ.
ಕರ್ನಾಟಕ
Comments are closed.