ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಾಜಿ ಸಚಿವ ಎ. ಮಂಜು ಸ್ಫೋಟಕ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು ಆಗುತ್ತಾ ಎಂಬ ಪ್ರಶ್ನೆ ಮೂಡುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಮಂಜು ಅವರು, ಚುನಾವಣೆ ಸಂದರ್ಭದಲ್ಲಿ ಅಫಿಡವಿಟ್‍ನಲ್ಲಿ ಸುಳ್ಳು ಮಾಹಿತಿ ಉಲ್ಲೇಖ ಮಾಡಿದ್ದು, ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಮಾಹಿತಿ ಸರಿಯಾಗಿ ನೀಡಿಲ್ಲ. ಅಫಿಡವಿಟ್‍ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ 5.78 ಲಕ್ಷ ಎಂದು ತೋರಿಸಿದ್ದಾರೆ. ಆದರೆ ಡಿಸೆಂಬರ್ 30 ರವರೆಗೂ 43,31,286 ರೂ.ಲಕ್ಷ ಹಣ ಇರುತ್ತೆ. ಪಡುವಲಹಿಪ್ಪೆಯ ಕರ್ನಾಟಕ ಬ್ಯಾಂಕ್‍ನಲ್ಲಿ ಪ್ರಜ್ವಲ್ ಬ್ಯಾಂಕ್ ಬ್ಯಾಲೆನ್ಸ್ 5,78,238 ರೂ. ಎಂದು ಉಲ್ಲೇಖವಾಗಿದೆ. ಆದರೆ ನಮ್ಮ ಪ್ರಕಾರ ಕರ್ನಾಟಕ ಬ್ಯಾಂಕ್‍ನಲ್ಲಿ 43,31,286 ರೂಪಾಯಿ ಇದೆ. ಹೀಗಾಗಿ ಇವರು ಸುಳ್ಳು ಮಾಹಿತಿಯನ್ನು ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
43 ಲಕ್ಷ ಬಿಟ್ಟು ಕೇವಲ 5 ಲಕ್ಷ ತೋರಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದರೆ 5 ವರ್ಷ ರಿಟರ್ನ್ಸ್ ತೋರಿಸಬೇಕು. ಆದರೆ ಕೇವಲ ಒಂದು ವರ್ಷ ಆದಾಯ ತೆರಿಗೆ ತೋರಿಸಿದ್ದಾರೆ. ಉಳಿದೆಲ್ಲವೂ ನಾಟ್ ಫೈಲ್ ಎಂದು ತೋರಿಸಿದ್ದಾರೆ. 2016 ರಲ್ಲಿಯೇ ಮಿನರ್ವ್ ಸರ್ಕಲ್ ನಲ್ಲಿ ಅಕೌಂಟ್ ಓಪನ್ ಮಾಡಿದ್ದಾರೆ. ಆಗಲೇ ಹಲವು ಕಡೆ ಭೂಮಿಯನ್ನೂ ಖರೀದಿಸಿದ್ದರು. ಹೀಗಿದ್ದರೂ ಎಲ್ಲವನ್ನೂ ಮರೆಮಾಚಿದ್ದಾರೆ. ಕೇವಲ 18/19 ಎರಡು ವರ್ಷದ ತೆರಿಗೆ ತೋರಿಸಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಎ.ಮಂಜು ಆರೋಪ ಮಾಡಿದ್ದಾರೆ.
ಪ್ರಜ್ವಲ್ ಎಲ್‍ಎಲ್‍ಪಿ ಮತ್ತು ಡ್ರೋಣ್ ಎರಡು ಕಂಪನಿಯ ಪಾಲುದಾರರಾಗಿದ್ದು, ಒಂದು ಕಂಪನಿಗೆ 20%, ಇನ್ನೊಂದು ಕಂಪನಿಗೆ 25% ರಷ್ಟು ಪಾಲುದಾರರಾಗಿದ್ದಾರೆ. ಇದೆಲ್ಲವನ್ನೂ ಅಫಿಡವಿಟ್‍ನಲ್ಲಿ ತಿಳಿಸಿಲ್ಲ. ಹೊಳೆನರಸೀಪುರದಲ್ಲಿ ತಂದೆ ಸೂರಜ್ ಮತ್ತು ಪ್ರಜ್ವಲ್ ಅವರಿಗೆ ಗಿಫ್ಟ್ ಕೊಟ್ಟಿದ್ದಾರೆ. ಆ ಗಿಫ್ಟ್ ನಿವೇಶನ ಅಂತ ಅಫಿಡವಿಟ್‍ನಲ್ಲಿ ತೋರಿಸಿದ್ದಾರೆ. ಆದರೆ ವಾಸ್ತವವಾಗಿ ಅದು ಕನ್ವೆನ್ಷನ್ ಹಾಲ್ ಆಗಿದೆ. ಚೆನ್ನಾಂಬಿಕಾ ಕನ್ವೆನ್ಷನ್ ಹಾಲ್ ಅಂತ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಹೈವೇಯಲ್ಲಿ ಕಟ್ಟಿರುವುದರಿಂದ ದೂರು ಕೂಡ ನೀಡಲಾಗಿತ್ತು. ಸುಮಾರು ಐದಾರು ಕೋಟಿಯ ಬೆಲೆ ಬಾಳುವ ಕನ್ವೆನ್ಷನ್ ಹಾಲ್ ಇದಾಗಿದ್ದು, ಕೋರ್ಟ್ ಕೂಡ ಡೆಮಾಲಿಶನ್‍ಗೆ ಆದೇಶಿಸಿತ್ತು. ಹೀಗಿದ್ದರೂ ಅಧಿಕಾರ ದುರುಪಯೋಗ ಮಾಡಿ ಇಲ್ಲಿಯವರೆಗೆ ಉಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ನೆಲಮಂಗಲದ ಬಳಿ 12 ಎಕರೆ ಭೂಮಿ ಖರೀದಿಸಿದ್ದಾರೆ. ಬಾವಿಕೆರೆ ಎಂಬಲ್ಲಿ 12 ಎಕರೆ ಖರೀದಿಸಿದ್ದಾರೆ. ಆದರೆ ಮಾರ್ಕೆಟ್ ಬೆಲೆಯನ್ನ ನಮೂದಿಸಿಲ್ಲ. ಅಲ್ಲಿ 2.5 ಕೋಟಿ ಎಕರೆಗೆ ಬೆಲೆಯಿದೆ. ಆದರೆ ಕೇವಲ 54 ಲಕ್ಷ ಮಾತ್ರ ತೋರಿಸಿದ್ದಾರೆ. ಬೇನಾಮಿ ಹೆಸರಿನಲ್ಲಿ 45 ಎಕರೆಗೆ ಬೇಲಿ ಹಾಕಿದ್ದಾರೆ. ಸರ್ಕಾರಿ ಖರಾಬು ಭೂಮಿಯನ್ನೂ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಎ.ಮಂಜು ಆರೋಪಿಸಿದ್ದಾರೆ.
ಈಗಾಗಲೇ ಅವರ ಆಸ್ತಿ ವಿಚಾರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ದಾಖಲಾತಿ ಸಮೇತವಾಗಿ ದೂರು ದಾಖಲಿಸಿದ್ದೇವೆ. ಮಾಜಿ ಪ್ರಧಾನಿ ಅವರ ಮೊಮ್ಮಗ ಎಂದು ಸುಮ್ಮನ್ನಿರಬೇಡಿ, ಸರ್ಕಾರಕ್ಕೆ ಮೋಸ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾನು ಮನವಿ ಮಾಡಿಕೊಂಡಿದ್ದೇನೆ. ಅವರು ಕೂಡ ಈ ದೂರನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Comments are closed.