ಬೆಂಗಳೂರು [ಜೂ.27] : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಇದೇನು ಪೊಲೀಸ್ ರಾಜ್ ಆಗಿದೆಯೇ? ಪೊಲೀಸ್ ರಾಜ್ ಆಗಿ ಪರಿವರ್ತನೆಯಾದರೆ ಜನ ಸಾಮಾನ್ಯರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ವಿರುದ್ಧ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಸೇರಿ ಸಾಮಾಜಿಕ ಜಾಲ ತಾಣಗಳಲ್ಲಿ ಮಾನಹಾನಿ ಪೋಸ್ಟ್ ಹಾಕಿದ ಆರೋಪದ ಮೇಲೆ ‘ಟ್ರೋಲ್ ಮಗ’ ಪುಟದ ಅಡ್ಮಿನ್ ಜೈಕಾಂತ್ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಿ ಐದು ದಿನಗಳ ಕಾಲ ವಶದಲ್ಲಿಟ್ಟುಕೊಂಡಿರುವ ಶ್ರೀರಾಂಪುರ ಠಾಣೆಯ ಪೊಲೀಸರ ಕ್ರಮವನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು ತೀವ್ರವಾಗಿ ಖಂಡಿಸಿ, ಪೊಲೀಸ್ ಕಸ್ಟಡಿಯಿಂದ ಕೂಡಲೇ ಜೈಕಾಂತ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಪೊಲೀಸರಿಗೆ ನಿರ್ದೇಶಿಸಿದರು.
ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧದ ಶ್ರೀರಾಂಪುರ ಪೊಲೀಸರು ಮೊದಲನೆ ಎಫ್‌ಐಆರ್ ದಾಖಲಿಸಿದ್ದರ ಕುರಿತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದರೂ ಎರಡನೇ ಎಫ್‌ಐಆರ್ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ಮೊದಲು ಜೆಡಿಎಸ್ ಪ್ರಧಾನ ಕಾರ್ಯದರ್ಶಿ, ಎರಡನೇ ಬಾರಿ ಜೆಡಿಎಸ್ ಐಟಿ ಘಟಕದ ಮುಖ್ಯಸ್ಥರ ಲೆಟರ್ ಹೆಡ್‌ನಲ್ಲಿ ದೂರು ನೀಡಿದ್ದಾರೆ. ಹಾಗಾದರೆ, ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೇ? ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ಮೇಲೂ ಯಾಕೆ ಎರಡನೇ ಎಫ್‌ಐಆರ್ ದಾಖಲಿಸಿ ಅರ್ಜಿದಾರರನ್ನು ವಶಕ್ಕೆ ಪಡೆಯಲಾಯಿತು? ಅಂತಹ ಅಗತ್ಯತೆ ಹಾಗೂ ತುರ್ತು ಪರಿಸ್ಥಿತಿ ಏನಿತ್ತು ಎಂದು ನ್ಯಾಯಮೂರ್ತಿ ಖಾರವಾಗಿ ಪ್ರಶ್ನಿಸಿದರು.
ಅಲ್ಲದೆ, ಈ ಘಟನೆಯನ್ನು ನೋಡುತ್ತಿದ್ದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಮುರಿದು ಬಿದ್ದಿದೆ ಎಂದೆನಿಸುತ್ತಿದೆ. ಪೊಲೀಸ್ ರಾಜ್ಯವಾದರೆ ಜನ ಸಾಮಾನ್ಯರು ರಸ್ತೆಯಲ್ಲಿ ಓಡಾಡಲೂ ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಾಜ್ಯದಲ್ಲಿ ಕಾನೂನಿನ ಆಡಳಿತ ಇಲ್ಲವೆಂಬ ಭಾವನೆ ಬರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜ್ಯದಲ್ಲಿ ಇಂತಹ ಘಟನೆ ಖಂಡನೀಯ ಎಂದು ನ್ಯಾಯಮೂರ್ತಿಗಳು ಕೆಂಡ ಕಾರಿದರು. ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರ ಹಸ್ತಕ್ಷೇಪ ದಿನೇ ದಿನೇ ಹೆಚ್ಚುತ್ತಲೇ ಇದೆ. ಆಸ್ತಿ ವ್ಯಾಜ್ಯ ಹಾಗೂ ವಾಣಿಜ್ಯ ವ್ಯವಹಾರಗಳಲ್ಲಿಯೂ ಪೊಲೀಸರು ಮೂಗು ತೂರಿಸುತ್ತಾರೆ. ಈ ವರ್ತನೆ ಬದಲಿಸಿಕೊಳ್ಳುವಂತೆ ನ್ಯಾಯಾಲಯ ಅನೇಕ ಆದೇಶ ನೀಡಿದೆ. ಕಳೆದ ವಾರವಷ್ಟೇ ಡಿಸಿಪಿಯನ್ನು ಕೋರ್ಟ್‌ಗೆ ಕರೆಯಿಸಿ ಸೂಚಿಸಲಾಗಿದೆ.
ಆದರೆ, ಪೊಲೀಸರ ವರ್ತನೆ ಯಥಾಪ್ರಕಾರ ಮುಂದುವರಿಯುತ್ತಿದೆ. ಇಂತಹ ಘಟನೆಗಳು ನಡೆಯಬಾರದು ಹಾಗೂ ಪರಿಸ್ಥಿತಿಯನ್ನು ಸರಿಪಡಿಸಲೇಬೇಕು ಎಂದು ನ್ಯಾಯಮೂರ್ತಿ ಕಟುವಾಗಿ ನುಡಿದರು.
ನಾನೇ ಹೋದರೂ ಕಂಪ್ಲೇಂಟ್ ತಗೊಳ್ಳಲ್ಲ
ಪೊಲೀಸರ ಬಗ್ಗೆ ಈಚೆಗೆ ಡಿಜಿಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಡಿಜಿಪಿಯೊಂದಿಗೆ ಔಪಚಾರಿಕವಾಗಿ ಮಾತನಾಡುತ್ತಾ, ಹೀಗೆಲ್ಲಾ ಕಾರ್ಯಕ್ರಮ ನಡೆಸುವುದು ಶುದ್ಧ ವ್ಯರ್ಥ. ನೀವು ಹಾಗೂ ನಾವು 12 ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡಿಕೊಂಡು ದೂರು ನೀಡಲು ಸಿವಿಲ್ ಡ್ರೆಸ್‌ನಲ್ಲಿ ಹೋಗೋಣ. ಆದರೆ, ಠಾಣೆಯಲ್ಲಿ ದೂರು ಮಾತ್ರ ದಾಖಲಾಗುವುದೇ ಇಲ್ಲ. ಪರಿಸ್ಥಿತಿ ಅಷ್ಟರ ಮಟ್ಟಿಗೆ ಕೆಟ್ಟುಹೋಗಿದೆ ಎಂಬುದಾಗಿ ಹೇಳಿದೆ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್, ಅಡ್ವೋಕೇಟ್ ಜನರಲ್ ಅವರಿಗೆ ಹೇಳಿದರು.
Comments are closed.