ಬೆಂಗಳೂರು(ಜೂನ್ 28): ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು 24X7 ರಾಜಕಾರಣಿ ಎಂದು ಬಣ್ಣಿಸುವವರಿದ್ದಾರೆ. ಗೌಡರ ಅನೇಕ ರಾಜಕೀಯ ನಡೆಗಳು ಅವರ ಗುರಿಯ ಸುಳಿವು ನೀಡುವುದೇ ಇಲ್ಲ. ಇದು ಅನೇಕ ಬಾರಿ ಸಾಬೀತಾಗಿದೆ. ಹೀಗಾಗಿ, ದೇವೇಗೌಡರು ಏನೇ ಮಾಡಿದರೂ ಅದನ್ನು ಎದುರಾಳಿಗಳು ಗಂಭೀರವಾಗಿ ಪರಿಗಣಿಸುತ್ತಾರೆ. ಇತ್ತೀಚೆಗೆ, ಮಾಜಿ ಪ್ರಧಾನಿಗಳು ಮಧ್ಯಂತರ ಚುನಾವಣೆ ನಡೆಯಬೇಕಾಗಬಹುದು ಎಂದು ಹೇಳಿಕೆ ನೀಡಿದ್ದರು. ಇವರ ಈ ಬಾಂಬಿಗೆ ವಿಪಕ್ಷ ಬಿಜೆಪಿ ಜೊತೆಗೆ ಮೈತ್ರಿಪಕ್ಷ ಕಾಂಗ್ರೆಸ್ ಕೂಡ ಬೆಚ್ಚಿಬಿದ್ದಿದೆ. ಆಪರೇಷನ್ ಕಮಲದ ಗುಂಗಿನಲ್ಲೇ ಇದ್ದ ಬಿಎಸ್ ಯಡಿಯೂರಪ್ಪ ಸಿಡಿಮಿಡಿಗೊಂಡರೆ, ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ.
ಮಧ್ಯಂತರ ಚುನಾವಣೆ ನಡೆಯಬಹುದೆಂದು ಭವಿಷ್ಯ ಹೇಳಿದ್ದಷ್ಟೇ ಅಲ್ಲ, ಕಾಂಗ್ರೆಸ್ ನಾಯಕರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ಅಡಗಿದೆ ಎಂದು ದೇವೇಗೌಡರು ಹೇಳಿದ್ದು ಕಾಂಗ್ರೆಸ್ಸಿಗರಿಗೆ ಪೀಕಲಾಟ ತಂದಿದೆ. ಈ ಹೇಳಿಕೆ ಹಿಂದಿರುವ ಗೌಡರ ಪ್ಲಾನ್ನ ಸುಳಿವು ಪಡೆದಿರುವ ಕೈ ನಾಯಕರ ಎಚ್ಚೆತ್ತುಕೊಂಡಿರುವಂತಿದೆ. ತಾವ್ಯಾರು ಸರಕಾರದ ವಿರುದ್ಧ ಮಾತನಾಡಬಾರದು. ಜೆಡಿಎಸ್ನವರೇ ಸರ್ಕಾರ ಬೀಳಿಸಿಕೊಂಡರೆ ಬೀಳಲಿ. ತಮಗೆ ಅಪವಾದ ಬರುವುದು ಬೇಡ ಎನ್ನುವ ಜಾಣ ನಡೆಗಳನ್ನ ಇಡಲು ಕಾಂಗ್ರೆಸ್ಸಿಗರು ನಿರ್ಧರಿಸಿದ್ದಾರೆ. ಕೈ ನಾಯಕರ ಸಭೆಯಲ್ಲಿ ಕೆ.ಸಿ. ವೇಣುಗೋಪಾಲ್ ಅವರು ಹಿರಿಯ ನಾಯಕರೆಲ್ಲರಿಗೂ ಕಟ್ಟುನಿಟ್ಟು ಸೂಚನೆ ರವಾನಿಸಿದ್ದಾರೆನ್ನಲಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಕಾಯಕಲ್ಪ?
ಲೋಕಸಭೆ ಚುನಾವಣೆಯಲ್ಲಿನ ಸೋಲು, ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಸಂಘಟನೆಯನ್ನು ಬಲಗೊಳಿಸುವತ್ತ ಗಮನ ಹರಿಸುತ್ತಿದೆ. ವಿಸಿಟಿಂಗ್ ಕಾರ್ಡ್ ಸಂಸ್ಕೃತಿಯ ನಾಯಕರಿಗೆ, ಸೋಂಬೇರಿಗಳಿಗೆ, ಕೆಲಸ ಮಾಡದವರಿಗೆ ಪಕ್ಷದಿಂದ ಹೊರಕಳುಹಿಸುವ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ರೋಷನ್ ಬೇಗ್ ಅವರಂತೆ ಪಕ್ಷ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ಪಕ್ಷದ ಕಾರ್ಯಕರ್ತರಿಗೆ, ಯುವಕರಿಗೆ, ಕ್ರಿಯಾಶೀಲರಾಗಿರುವವರಿಗೆ ಆದ್ಯತೆ ನೀಡಲು ಹೈಕಮಾಂಡ್ ತೀರ್ಮಾನ ಮಾಡಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೂತ್ ಸಮಿತಿ ರಚಿಸಲಾಗುತ್ತಿದೆ. 840 ಬ್ಲಾಕ್ ಕಮಿಟಿಗಳಿಗೂ ಕಾಯಕಲ್ಪ ನೀಡಲಾಗುತ್ತಿದೆ. 36 ಜಿಲ್ಲಾ ಸಮಿತಿಗಳಿಗೆ ಹೊಸಬರ ನೇಮಕವಾಗುತ್ತಿದೆ. ಹನುಮಂತನ ಬಾಲದಂತೆ ಇದ್ದ ಕೆಪಿಸಿಸಿ ಪದಾಧಿಕಾರಿಗಳ ಸಂಖ್ಯೆಯನ್ನು 80ಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಕಾರಿ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದ ಪದಾಧಿಕಾರಿಗಳನ್ನು ಕಿತ್ತುಹಾಕಲಾಗಿದೆ. ಹಿರಿಯ ನಾಯಕರ ಹಿಂಬಾಲಕರ ಬದಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗುತ್ತಿದೆ.
ನಿಗಮ ಮಂಡಳಿಗಳ ನಿರ್ದೇಶಕರು, ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ಅರ್ಹ ಕಾರ್ಯಕರ್ತರಿಗೆ ಮಾತ್ರ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ತಳಮಟ್ಟದಿಂದ ನಾಯಕತ್ವ ಬದಲಾವಣೆಗಳೊಂದಿಗೆ ಪಕ್ಷಕ್ಕೆ ಪುನಶ್ಚೇತನ ನೀಡಲಾಗುತ್ತಿದೆ. ಈ ಮೂಲಕ ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಪಕ್ಷ ಭರದಿಂದ ಸಿದ್ಧವಾಗುತ್ತಿದೆ.
Comments are closed.