ಬೆಂಗಳೂರು(ಜುಲೈ.07): ರಾಜ್ಯಪಾಲ ವಜುಭಾಯಿ ವಾಲಾರಿಗೆ ರಾಜೀನಾಮೆ ನೀಡಿದ ಬಳಿಕ, ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಶಾಸಕ ಎಚ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ರಾಜಭವನದಿಂದ ಹೊರಬರುತ್ತಿದ್ದಂತೆ ಮಾಧ್ಯಮದ ಜೊತೆಗೆ ಮಾತಾಡಿದ ಅವರು, “ನಾವು 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದೇವೆ. ಈಗಾಗಲೇ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡಲಾಗಿದೆ. ಅಂತೆಯೇ ರಾಜ್ಯಪಾಲರಿಗೂ ರಾಜೀನಾಮೆ ನೀಡಿದ್ದರ ಬಗ್ಗೆ ಗಮನಕ್ಕೆ ತಂದಿದ್ದೇವೆ” ಎಂದರು.
ನಮ್ಮ ರಾಜೀನಾಮೆಗೆ ಯಾವುದೇ ಬಿಜೆಪಿ ನಾಯಕರು ಕಾರಣವಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿಲ್ಲ. ಹೀಗಾಗಿಯೇ ನಾವು ರಾಜೀನಾಮೆ ನೀಡಬೇಕಾಗಿ ಬಂತು. ನಾವು ಯಾವ ಬಿಜೆಪಿಗೂ ಸೇರುತ್ತಿಲ್ಲ ಎಂದಿದ್ದಾರೆ ಹಿರಿಯ ಶಾಸಕ ಎಚ್. ವಿಶ್ವನಾಥ್.
ಸರ್ಕಾರದಲ್ಲಿ ಶಿಕ್ಷಣವನ್ನು ಈಗಾಗಲೇ ಕೊಂದು ಹಾಕಲಾಗಿದೆ. ಸರ್ಕಾರವನ್ನು ನಡೆಸುತ್ತಿರೋರು ಯಾವುದೇ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಇಲ್ಲಿ ರಾಜೀನಾಮೆ ನೀಡಿದ ಎಲ್ಲರೂ ಹಿರಿಯರಾಗಿದ್ದೇವೆ. ನಮ್ಮ ರಾಜೀನಾಮೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ನೇರ ಹೊಣೆ ಸರ್ಕಾರ ನಡೆಸುತ್ತಿರುವ ನಾಯಕರೇ ಎಂದು ನೇರವಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದರು.
ರಾಜ್ಯ ರಾಜಕಾರಣದಲ್ಲಿ ಚಂಡಮಾರುತ ಬೀಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ 14 ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿರುವುದು ದೃಢವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿದ್ದು, ಹೀಗಿರುವಾಗಲೇ ರಾಜ್ಯ ರಾಜಕಾರಣದಲ್ಲಿ ಬೃಹತ್ ಬದಲಾವಣೆ ನಡೆಯುತ್ತಿದೆ.
ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆ ಪತ್ರವನ್ನು ಕಛೇರಿಯಲ್ಲಿ ಸ್ವೀಕಾರ ಮಾಡಲಾಗಿದೆ. ಯಾರೂ ಕೂಡ ನನ್ನ ಬಳಿ ಈ ಬಗ್ಗೆ ಮಾತನಾಡಲು ಅಪಾಯಿಂಟ್ ಮೆಂಟ್ ತೆಗೆದುಕೊಂಡಿಲ್ಲ. ಫೋನ್ ಕೂಡ ಮಾಡಿಲ್ಲ. ಸ್ವೀಕೃತಿ ಪತ್ರ ಕೊಡಲು ನಾನು ಆಪ್ತ ಕಾರ್ಯದರ್ಶಿಗೆ ತಿಳಿಸಿದ್ದೇನೆ. ಭಾನುವಾರ ಕಛೇರಿಗೆ ರಜೆ ಇದೆ. ವೈಯಕ್ತಿಕ ಕಾರಣಗಳಿಂದ ನಾನು ಸೋಮವಾರ ಲಭ್ಯವಿಲ್ಲ. ಹೀಗಾಗಿ ಮಂಗಳವಾರ ಈ ಬಗ್ಗೆ ಪರಿಶೀಲಿಸುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
Comments are closed.