ಕರ್ನಾಟಕ

ಶಾಸಕರ ರಾಜೀನಾಮೆಗೆ ಕಾರಣವೇನು?

Pinterest LinkedIn Tumblr


ಬೆಂಗಳೂರು: ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಭಾವುಟ ಹಾರಿಸಿರುವ 13 ಶಾಸಕರು ಸರ್ಕಾರಕ್ಕೆ ಮುಳುವಾಗಿದ್ದಾರೆ. ಇತ್ತ ರಾಜೀನಾಮೆ ಕೊಟ್ಟಿರುವ ಶಾಸಕರ ಈ ನಿರ್ಧಾರಕ್ಕೆ ಕಾರಣಗಳು ಏನು ಎಂಬುವುದು ಕೂಡ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಆರಂಭಗೊಂಡ ಜಾರಕಿಹೊಳಿ ರಾಜಕೀಯ ವೈರುಧ್ಯ 13 ಶಾಸಕರ ರಾಜೀನಾಮೆವರೆಗೂ ಬಂದಿದ್ದು, ಈ ಅವಧಿಯ ಬೆಳವಣಿಗೆಗಳು ಶಾಸಕರ ಪ್ರಮುಖ ರಾಜೀನಾಮೆಗೆ ಪ್ರಮುಖ ಕಾರಣವಾಗಿದೆ. ಪ್ರಮುಖವಾಗಿ ಬಂಡಾಯ ಶಾಸಕರ ನಾಯಕತ್ವ ವಹಿಸಿದ್ದ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ರಮೇಶ್ ವಿರುದ್ಧ ನಿಂತ ಸಚಿವ ಡಿಕೆ ಶಿವಕುಮಾರ್ ಅವರು ನಿಂತಿದ್ದೆ ಕಾರಣ ಎನ್ನಲಾಗಿದೆ. ಅಲ್ಲದೇ ಇದೇ ವೇಳೆ ಸಚಿವ ಸ್ಥಾನದಿಂದ ಕಿತ್ತು ಹಾಕಿ ಅವಮಾನ ಮಾಡಿದ್ದು, ಪಿಎಲ್‍ಡಿ ಬ್ಯಾಂಕ್ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮೇಲುಗೈ ಸಾಧಿಸಿದ್ದು ಕೂಡ ರಮೇಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್‍ನಿಂದ ದೂರ ಮಾಡಿತ್ತು. ಆ ಬಳಿಕ ಸಹೋದರ ಸತೀಶ್ ಜಾರಕಿಹೊಳಿಗೆ ಮಣೆ ಹಾಕಿ, ಸಾಹುಕಾರ ಹೋದ್ರೆ ಹೋಗ್ಲಿ ನಷ್ಟ ಇಲ್ಲ ಎಂಬ ಸಿದ್ದು ಧೋರಣೆಯೂ ರಾಜೀನಾಮೆಗೆ ಕಾರಣ ಎನ್ನಲಾಗಿದೆ.

ಇಂದಿನ ಶಾಸಕ ರಾಜೀನಾಮೆ ನಡೆಯಲ್ಲಿ ಅಚ್ಚರಿ ಮೂಡಿಸಿದ್ದ ಕಾಂಗ್ರೆಸ್ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಅವರಿಗೆ ರಾಜೀನಾಮೆಗೆ ಪ್ರಮುಖ ಕಾರಣ ಬೆಂಗಳೂರಿನಲ್ಲಿ ಕಿರಿಯರಿಗೆ ಮಣೆ ಹಾಕಿ ಸಚಿವ ಸ್ಥಾನ ನಿರಾಕರಿಸಿದ್ದು. ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇಷ್ಟಾದರು ಸಿದ್ದರಾಮಯ್ಯ ಹಾಗೂ ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರು ನಿರ್ಲಕ್ಷ್ಯ ಮಾಡಿದ್ದರು. ಅಸಮಾಧಾನವಾಗಿದ್ರೂ ಮನವೊಲಿಸಲು ಹೈಕಮಾಂಡ್ ಯಾವುದೇ ಪ್ರಯತ್ನ ಮಾಡಿಲ್ಲ. ಇದರಿಂದ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಬಿಜೆಪಿಯಲ್ಲಿ ನನಗೆ ಮತ್ತು ಮಗಳಿಗೆ ಭವಿಷ್ಯ ಇದೆ ಎನ್ನುವ ಲೆಕ್ಕಾಚಾರ ಹಾಗೂ ಸಿದ್ದರಾಮಯ್ಯ ಆಂಡ್ ಟೀಂಗೆ ಬಿಸಿ ಮುಟ್ಟಿಸಲು ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷರಾಗಿದ್ದ ಎಚ್ ವಿಶ್ವನಾಥ್ ರಾಜೀನಾಮೆ ಜೆಡಿಎಸ್ ವರಿಷ್ಠರಿಗೆ ಶಾಕ್ ನೀಡಿದೆ. ಸಿದ್ದರಾಮಯ್ಯ ವಿರುದ್ಧ ತಗೊಡೆ ತಟ್ಟಿ ರಾಜೀನಾಮೆಗೆ ನಿರ್ಧಾರ ಮಾಡಿರುವ ವಿಶ್ವನಾಥ್ ಅವರು, ಸಮನ್ವಯ ಸಮಿತಿಯಿಂದ ದೂರ ಇಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದರು. ಪಕ್ಷದ ಅಧ್ಯಕ್ಷರಾದರು ಪದೇ ಪದೇ ಅವರಿಗೆ ಅವಮಾನ ಎದುರಾಗಿತ್ತು. ಇದರಿಂದ ಬೇಸತ್ತು ಪದತ್ಯಾಗ ನಿರ್ಧಾರ ಮಾಡಿದ್ರು. ಅಲ್ಲದೇ ತಮ್ಮ ಮತ್ತು ಮಗನ ಭವಿಷ್ಯಕ್ಕಾಗಿ ಬಿಜೆಪಿ ಸೇರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಮೂರು ಬಾರಿ ಸಂಪುಟ ವಿಸ್ತರಣೆ ಆದರೂ ಸಚಿವ ಸ್ಥಾನ ಆಸೆ ಹೊಂದಿದ್ದ ಬಿಸಿ ಪಾಟೀಲ್ ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ದೋಸ್ತಿಗಳು ಮಂತ್ರಿಗಿರಿ ನೀಡದ ಕಾರಣ ಬಿ.ಸಿ ಪಾಟೀಲ್ ರಾಜೀನಾಮೆ ನಿರ್ಧಾರಕ್ಕೆ ಮುಂದಾಗಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್‍ನಿಂದ ಒಂದು ಕಾಲು ಹೊರಗೇ ಇಟ್ಟಿರುವ ಬಿಸಿ ಪಾಟೀಲ್ ಅವರಿಗೆ ನಿಗಮ ಮಂಡಳಿಯಲ್ಲೂ ಯಾವುದೇ ಸ್ಥಾನಮಾನ ಸಿಕ್ಕಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ ನಂಬಿ ಕೂತರೆ ಭವಿಷ್ಯ ಇಲ್ಲ ಎಂದು ನಿರ್ಧರಿಸಿ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬಳಿಕ ಯಾವುದೇ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿದ್ದ ಆನಂದ್ ಸಿಂಗ್ ಅವರು, ಬಿಜೆಪಿಯಿಂದಲೇ ಬಂದು ಮತ್ತೆ ಮಾತೃಪಕ್ಷಕ್ಕೆ ಹೋಗುವ ತೀರ್ಮಾನ ಮಾಡಿದ್ದು, ಬಳ್ಳಾರಿ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪವೇ ಆನಂದ್ ಸಿಂಗ್ ಸಿಟ್ಟಿಗೆ ಕಾರಣವಾಗಿತ್ತು. ಇತ್ತ ಕಂಪ್ಲಿ ಗಣೇಶ್ ಬಡಿದಾಟದಲ್ಲೂ ಪಕ್ಷದ ಬೆಂಬಲ ಅವರಿಗೆ ಸಿಕ್ಕಿರಲಿಲ್ಲ. ಪರಿಣಾಮ ಜಿಂದಾಲ್ ವಿವಾದ ನೆಪವಾಗಿಸಿ ಸಚಿವ ಸ್ಥಾನ ಸಿಗದ ಕಾರಣ ರಾಜೀನಾಮೆ ನೀಡಿದ್ದಾರೆ.

ಉಳಿದಂತೆ ಜೆಡಿಎಸ್‍ನಲ್ಲಿ ಸಿಗದ ಸ್ಥಾನಮಾನ, ಸಚಿವ ಸ್ಥಾನ ಹಾಗೂ ಮಂಡ್ಯ ರಾಜಕೀಯದಲ್ಲೂ ಹಿಡಿತ ಸಿಗದ ಹಿನ್ನೆಲೆಯಲ್ಲಿ ನಾರಾಯಣ ಗೌಡ ಅವರು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಮುಖವಾಗಿ ಕೆಆರ್ ಪೇಟೆ ರಾಜಕೀಯದಲ್ಲಿ ರೇವಣ್ಣ-ಭವಾನಿ ರೇವಣ್ಣ ಹಸ್ತಕ್ಷೇಪ ಹಾಗೂ ಎಲೆಕ್ಷನ್ ರಾಜಕೀಯಕ್ಕೆ ವಿದಾಯದತ್ತ ಚಿಂತನೆ ನಡೆಸಿದ್ದ ಅವರು ಮೊದಲಿನಿಂದಲೂ ಬಿಜೆಪಿ ಸೇರುವತ್ತ ಹೆಚ್ಚು ಒಲವು ತೋರಿದ್ದರು.

ಮೈತ್ರಿ ಸರ್ಕಾರದಲ್ಲಿ ದೇವೇಗೌಡರ ಕುಟುಂಬದ ವಿಪರೀತ ಹಸ್ತಕ್ಷೇಪಕ್ಕೆ ಅಸಮಾಧಾನ ಗೊಂಡಿದ್ದ ಎಸ್.ಟಿ ಸೋಮಶೇಖರ್ ಅವರನ್ನು ಬಿಡಿಎ ಆಯುಕ್ತರ ಬದಲಾವಣೆಗೆ ಡಿಸಿಎಂ ಪರಮೇಶ್ವರ್ ಸತಾಯಿಸಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ನೀಡಿದ್ದರು. ಪರಿಣಾಮ ಬಿಜೆಪಿ ಸೇರಿದರೆ ಬೆಂಗಳೂರು ರಾಜಕಾರಣದಲ್ಲಿ ಭವಿಷ್ಯ ಇದೆ ಎಂಬ ಕಾರಣದಿಂದ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷದ ನಿಷ್ಠರಾಗಿದ್ದ ಶಾಸಕ ಮುನಿರತ್ನ ಅವರ ರಾಜೀನಾಮೆ ಪಕ್ಷದ ನಾಯಕರಿಗೆ ಅಚ್ಚರಿ ಹಾಗೂ ಆಘಾತಕಾರಿಯಾಗಿದ್ದು, ಬಿಜೆಪಿಗೆ ಸೇರಿದರೆ ಬೆಂಗಳೂರಿನಲ್ಲಿ ಉತ್ತಮ ಭವಿಷ್ಯ ಸಿಗಲಿದೆ. ದೋಸ್ತಿ ಸರ್ಕಾರದಲ್ಲಿ ಯಾವುದೇ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆಗೆ ಸಲ್ಲಿಸಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

ಆರಂಭದಿಂದಲೂ ಸಚಿವ ಸ್ಥಾನ ಮೇಲೆ ಕಣ್ಣಿಟ್ಟಿದ್ದ ಶಿವರಾಂ ಹೆಬ್ಬಾರ್ ಅವರಿಗೆ ಪಕ್ಷದ ನಾಯಕರು ಸಚಿವ ಸ್ಥಾನ ನೀಡದೇ ಸತಾಯಿಸಿದ್ದರು. ಅಲ್ಲದೇ ಸಚಿವ ಸ್ಥಾನ ನೀಡದೆ ನಿಗಮ ಮಂಡಳಿ ಕೊಟ್ಟಿದ್ದು ಅಸಮಾಧಾನ ಹೆಚ್ಚಾಗಲು ಕಾರಣವಾಗಿತ್ತು. ಮೊದಲಿನಿಂದಲೂ ಬಿಜೆಪಿ ಕಡೆ ಹೆಚ್ಚು ಒಲವು ಹೊಂದಿದ್ದ ಅವರು ಉತ್ತರ ಕನ್ನಡದಲ್ಲಿ ಸೇಫ್ ಎಂಬ ಮುಂದಾಲೋಚನೆಯೊಂದಿಗೆ ಬಿಜೆಪಿಗೆ ಸೇರಲು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ರಾಜಕೀಯ ಗುರು ರಮೇಶ್ ಜಾರಕಿಹೊಳಿ ಹಾದಿಯಲ್ಲೇ ಸಾಗಿರುವ ಮಹೇಶ್ ಕುಮಟಳ್ಳಿ ಅವರು ಗುರು ಆದೇಶದಂತೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ರಮೇಶ್ ಹಾರಕಿಹೊಳಿಗೆ ಹೈಕಮಾಂಡ್ ಅವಮಾನ ಮಾಡಿದ್ದರಿಂದ ರಮೇಶ್‍ಗೆ ಕೊಟ್ಟ ಮಾತಿನಂತೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

8 ತಿಂಗಳ ಮೊದಲೇ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೊಡ್ತೀವಿ ಎಂದು ಹೇಳಿ ಕಾಂಗ್ರೆಸ್ ನಾಯಕರು ಕೈಕೊಟ್ಟಿದ್ದರು. ರಮೇಶ್ ಜಾರಕಿಹೊಳಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಅವರು, ಬಿಎಸ್‍ವೈಗೆ ಮೊದಲೇ ನೀಡಿದ್ದ ಮಾತಿನಿಂತೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಬಿಜೆಪಿಯಿಂದ ಒಳ್ಳೆ ಭವಿಷ್ಯ ಇದೆ ಎಂಬ ಕಾರಣದಿಂದ ಭೈರತಿ ಬಸವರಾಜ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು, ಸಿದ್ದರಾಮಯ್ಯ ಆಪ್ತವಲಯದಲ್ಲಿದ್ದರೂ ಕೆ.ಜೆ. ಜಾರ್ಜ್ ಜೊತೆ ಮನಸ್ತಾಪ ಅವರ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿತ್ತು. ಸಿದ್ದರಾಮಯ್ಯ ಹೆಚ್ಚು ಕೆಜೆ ಜಾರ್ಜ್ ಮತ್ತು ಭೈರತಿ ಸುರೇಶ್‍ಗೆ ಮಣೆ ಹಾಕಿದ್ದು ಭೈರತಿ ಬಸವರಾಜ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಜೆಡಿಎಸ್ ಪಕ್ಷದ ನಾಯಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಶಾಸಕ ಗೋಪಾಲಯ್ಯ ಅವರು ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆಯ ಅಸಮಾಧಾನ ಹೊಂದಿದ್ದರು. ಮುಂದಿನ ಭವಿಷ್ಯವನ್ನು ನೋಡಿಕೊಂಡು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

Comments are closed.