ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಇಬ್ಬರು ಕಾಂಗ್ರೆಸ್ ಶಾಸಕರು ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ , ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಡಿ. ಕೆ. ಶಿವಕುಮಾರ್ ಶಾಸಕರಾದ ರಾಮಲಿಂಗಾರೆಡ್ಡಿ ಹಾಗೂ ಮುನಿರತ್ನ ಅವರೊಂದಿಗೆ ಸಭೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ, ರೇವಣ್ಣ ಉಪಮುಖ್ಯಮಂತ್ರಿಯಾಗಲಿ ಎಂದು ಈ ಶಾಸಕರು ಒತ್ತಾಯ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ, ಅಂಜಲಿ ನಿಂಬಲ್ಕರ್ , ಕೆ, ಸುಧಾಕರ್ ಮತ್ತಿತರ ಹಲವು ನಾಯಕರು ಕೂಡಾ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದ್ದಂತೆ ಕಾಣುತ್ತಿಲ್ಲ. ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಕುಮಾರಸ್ವಾಮಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ಆದರೆ, ಎಲ್ಲವೂ ಅವರ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ. ಅಧಿಕಾರ, ಹಣಕ್ಕಾಗಿ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿದೆ.
Comments are closed.