ಕರ್ನಾಟಕ

ಸ್ಪೀಕರ್ ನಿರ್ಧಾರ ಕಾನೂನುಪ್ರಕಾರ ಇದೆಯಾ? ತಜ್ಞರು ಏನಂತಾರೆ?

Pinterest LinkedIn Tumblr


ಬೆಂಗಳೂರು(ಜುಲೈ 09): ಸ್ಪೀಕರ್ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿ ಬಳಿ ರಾಜೀನಾಮೆ ಸಲ್ಲಿಸಿದ್ದ ಮೈತ್ರಿ ಸರ್ಕಾರದ 13 ಶಾಸಕರ ಪೈಕಿ 8 ಮಂದಿಯ ನಾಮಪತ್ರ ಕ್ರಮಬದ್ಧವಿಲ್ಲ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅಭಿಪ್ರಾಯಕ್ಕೆ ಬಂದಿದ್ದಾರೆ. ಸ್ಪೀಕರ್ ಅವರ ಈ ನಿರ್ಧಾರದಿಂದ ಮೈತ್ರಿ ಸರ್ಕಾರಕ್ಕೆ ಇನ್ನಷ್ಟು ಉಸಿರಾಟ ಸಿಕ್ಕಂತಾಗಿದೆ. ಆದರೆ, ಬಿಜೆಪಿ ಮತ್ತು ಅತೃಪ್ತ ಶಾಸಕರು ರಮೇಶ್ ಕುಮಾರ್ ತೀರ್ಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಅವರ ನಿರ್ಧಾರ ಕಾನೂನುಪ್ರಕಾರ ಇದೆಯಾ? ತಜ್ಞರು ಏನಂತಾರೆ?

ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರ ಪ್ರಕಾರ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರ ನ್ಯಾಯಸಮ್ಮತವಾಗಿಲ್ಲ. ಶಾಸಕರು ನೇರವಾಗಿ ರಾಜೀನಾಮೆ ನೀಡಬೇಕು ಎಂಬ ಕಾನೂನು ಇಲ್ಲ. ಸ್ಪೀಕರ್ ಅವರ ಕಾರ್ಯದರ್ಶಿ ಮತ್ತು ರಾಜ್ಯಪಾಲರ ಬಳಿ ರಾಜೀನಾಮೆ ನೀಡಿದ್ದಾರೆ. ಸ್ವಯಿಚ್ಛೆಯಿಂದ ರಾಜೀನಾಮೆ ನೀಡಿದಲ್ಲಿ ಅಂಗೀಕಾರ ಮಾಡಬೇಕು ಎಂದು ಹಿರಿಯ ವಕೀಲರು ಅಭಿಪ್ರಾಯಪಡುತ್ತಾರೆ.

ಪಕ್ಷಾಂತರ ನಿಷೇಧ ಕಾನೂನು ಪ್ರಕಾರ ಪಕ್ಷದ ವಿಪ್​ಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯ. ಆದರೆ, ಶಾಸಕರೇ ತಮಗೆ ಶಾಸಕ ಸ್ಥಾನ ಬೇಡ ಎಂದು ರಾಜೀನಾಮೆ ನೀಡಿದ ಮೇಲೂ ಅನರ್ಹತೆ ಮಾಡುವುದು ಅರ್ಥಹೀನ ಎಂದು ಬಿ.ವಿ. ಆಚಾರ್ಯ ಹೇಳುತ್ತಾರೆ.

ಸ್ಪೀಕರ್ ಅವರು ಒಂದು ರೀತಿ ನ್ಯಾಯಾಧೀಶರಿದ್ದಂತೆ. ಪಕ್ಷಪಾತ ಮಾಡದೇ ಸ್ವತಂತ್ರವಾಗಿ ವರ್ತಿಸಬೇಕು. ಈ ವಿಚಾರದಲ್ಲಿ ಅವರು ತಡ ಮಾಡುವುದು ಸರಿಯಲ್ಲ. ಆದರೆ, ಅವರು ವಿಳಂಬ ಮಾಡುತ್ತಿರುವುದು ನೋಡಿದರೆ ಅನುಮಾನಕ್ಕೆ ಎಡೆಯಾಗುತ್ತದೆ. ಶಾಸಕರನ್ನು ಹೆದರಿಸುವ ಕೆಲಸ ಮಾಡಬಾರದು. ಶಾಸಕರು ತಾವಾಗೇ ಬಂದು ರಾಜೀನಾಮೆ ನೀಡಿದರೆ ಅದನ್ನು ಅಂಗೀಕರಿಸಬೇಕು ಎಂದು ಮಾಜಿ ಅಡ್ವೊಕೇಟ್ ಜನರಲ್ ಕೂಡ ಆದ ಆಚಾರ್ಯರು ಸಲಹೆ ನೀಡುತ್ತಾರೆ.

ಸ್ಪೀಕರ್ ನಡೆ ವಿರುದ್ಧ ಅತೃಪ್ತ ಶಾಸಕರು ಕಾನೂನಿನ ಮೂಲಕ ಹೋರಾಟ ಮಾಡಬಹುದು ಎಂದು ಹೇಳಿದ ಬಿ.ವಿ. ಆಚಾರ್ಯ, ರಾಜ್ಯದ ಪ್ರಸ್ತುತ ರಾಜಕಾರಣದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ರಾಜಕಾರಣಿಗಳು ಕಾರಣವಿಲ್ಲದೆ ಕಿತ್ತಾಡುತ್ತಿದ್ದಾರೆ. ರಾಜ್ಯಪಾಲರು ಇದನ್ನು ಗಮನಿಸಬೇಕು ಎಂದವರು ಅಭಿಪ್ರಾಯಪಡುತ್ತಾರೆ. ಈ ಮೂಲಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯೇ ಸೂಕ್ತ ಎಂದು ಬಿ.ವಿ. ಆಚಾರ್ಯ ಅವರು ಪರೋಕ್ಷವಾಗಿ ಸೂಚಿಸಿದಂತಿದೆ.

ಇದೇ ವೇಳೆ, ಎಂಟು ಶಾಸಕರ ರಾಜೀನಾಮೆ ತಿರಸ್ಕರಿಸಿದ ಸ್ಪೀಕರ್ ಕ್ರಮವನ್ನು ಬಿಜೆಪಿ ನಾಯಕರುಗಳು ಕಟುವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕೆ.ಎಸ್. ಈಶ್ವರಪ್ಪ, ಶಾಸಕರ ರಾಜೀನಾಮೆಯಲ್ಲಿ ವ್ಯತ್ಯಾಸ ಇದ್ದರೆ ಅದನ್ನೇ ತಿದ್ದಿ ಅಂಗೀಕರಿಸಬೇಕಿತ್ತು ಎಂದು ಹೇಳಿದರು.

ನಾನು ಸ್ಪೀಕರ್ ತೀರ್ಮಾನ ಪ್ರಶ್ನೆ ಮಾಡಲ್ಲ. ಜನರ ಭಾವನೆಗಳನ್ನು ಗೌರವಿಸುತ್ತೇನೆ ಎನ್ನುತ್ತಾರೆ. ಆದರೆ, ಜನರ ಭಾವನೆಗೆ ಸ್ಪಂದಿಸಲು ಇದೇನು ಚುನಾವಣೆಯಾ? ಇದು ಬೇರೆ ಚುನಾವಣೆಯೇ ಬೇರೆ. ಜನರು ಈಗಾಗಲೇ ಚುನಾವಣೆಯಲ್ಲಿ ತೀರ್ಪು ಕೊಟ್ಟಿದ್ದಾರೆ. ಸ್ಪೀಕರ್ ಅವರು ಎಲ್ಲಾ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲಿ ಎಂದು ಈಶ್ವರಪ್ಪ ಆಗ್ರಹಿಸಿದರು.

Comments are closed.