ಕರ್ನಾಟಕ

ಸ್ಪೀಕರ್ ತೀರ್ಪಿಗೆ ಗೌರವ ಕೊಟ್ಟು ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲು ಅತೃಪ್ತರು ನಿರ್ಧಾರ

Pinterest LinkedIn Tumblr


ಬೆಂಗಳೂರು(ಜುಲೈ 09): ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ 13 ಶಾಸಕರ ಪೈಕಿ ಐವರ ನಾಮಪತ್ರ ಮಾತ್ರ ಕ್ರಮಬದ್ಧವಾಗಿದೆ. ಉಳಿದ ಎಂಟು ಮಂದಿಯದ್ದು ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ಇವತ್ತು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ವಿಧಾನಸಭಾಧ್ಯಕ್ಷರು ಬೇಕಂತಲೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಂದು ಅತೃಪ್ತ ಶಾಸಕರು ಮತ್ತು ಬಿಜೆಪಿ ಪಾಳಯದವರು ಆರೋಪಿಸುತ್ತಿದ್ದಾರೆ. ಏನೇ ಇರಲಿ, ಸ್ಪೀಕರ್ ತೀರ್ಪಿಗೆ ಗೌರವ ಕೊಟ್ಟು ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲು ಅತೃಪ್ತರು ನಿರ್ಧರಿಸಿದ್ದಾರೆ.

ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿಲ್ಲವೆನ್ನಲಾದ ಎಂಟು ಮಂದಿ ಈಗ ಮತ್ತೆ ಕ್ರಮಬದ್ಧವಾಗಿ ನಾಳೆ ರಾಜೀನಾಮೆ ನೀಡಲಿದ್ಧಾರೆ. ರಮೇಶ್ ಜಾರಕಿಹೊಳಿ, ಹೆಚ್. ವಿಶ್ವನಾಥ್, ಮಹೇಶ್ ಕುಮಟಳ್ಳಿ, ಮುನಿರತ್ನ, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ. ಸೋಮಶೇಖರ್ ಮತ್ತು ಬೈರತಿ ಬಸವರಾಜು ಅವರು ವಿಧಾನಸಭೆ ಕಲಾಪ ಪ್ರಾರಂಭವಾಗುವ ಮುನ್ನವೇ ಸ್ಪೀಕರ್ ಅವರಿಗೆ ಖುದ್ದಾಗಿ ಹೋಗಿ ರಾಜೀನಾಮೆ ಕೊಡಲಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಅತೃಪ್ತರು ಈ ನಿರ್ಧಾರಕ್ಕೆ ಬಂದಿದ್ಧಾರೆ.

ಈ ಎಂಟು ಮಂದಿ ನಾಳೆ ಬೆಂಗಳೂರಿಗೆ ಬಂದು ಸ್ಪೀಕರ್ ಬಳಿ ತೆರಳಿ ರಾಜೀನಾಮೆ ಸಲ್ಲಿಸಿ, ನಂತರ ವಾಪಸ್ ಹೋಗುವ ಪ್ಲಾನ್ ಮಾಡಿದ್ದಾರೆ. ಮುಂಬೈ ಅಥವಾ ಗುಡಗಾಂವ್ ಅಥವಾ ಗೋವಾಗೆ ಅತೃಪ್ತರು ನಾಳೆ ತೆರಳುವ ಸಾಧ್ಯತೆ ಇದೆ.

ಒಂದು ವೇಳೆ ಅವರು ಕಲಾಪಕ್ಕೆ ಮುನ್ನ ರಾಜೀನಾಮೆ ನೀಡದೇ ಇದ್ದರೆ ಕಾನೂನು ಸಂಕಷ್ಟ ಎದುರಾಗಬಹುದು. ಯಾಕೆಂದರೆ, ಕಲಾಪಕ್ಕೆ ಹಾಜರಾಗಬೇಕೆಂದು ವಿಪ್ ಹೊರಡಿಸಿದ ಬಳಿಕ ಅವರು ಕಲಾಪಕ್ಕೆ ತಪ್ಪದೇ ಹಾಜರಾಗಬೇಕಾಗುತ್ತದೆ. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಿ 6 ವರ್ಷ ರಾಜಕಾರಣದಿಂದ ದೂರವಿರಬೇಕಾಗುತ್ತದೆ. ಆದರೆ, ಕಲಾಪಕ್ಕೆ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಕಲಾಪಕ್ಕೆ ಹಾಜರಾಗುವ ಅಗತ್ಯವಿಲ್ಲ. ಹೀಗಾಗಿ, ಬುಧವಾರ ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ನೀಡಲು 8 ಶಾಸಕರು ನಿರ್ಧರಿಸಿದ್ದಾರೆ.

ಇವತ್ತು ರೋಷನ್ ಬೇಗ್ ರಾಜೀನಾಮೆ ನೀಡುವುದರೊಂದಿಗೆ ಮೈತ್ರಿಪಾಳಯದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಸಂಖ್ಯೆ 14ಕ್ಕೇರಿದೆ. ಇದರ ಜೊತೆಗೆ ಪಕ್ಷೇತರರಾದ ನಾಗೇಶ್ ಮತ್ತು ಶಂಕರ್ ಅವರು ಬಿಜೆಪಿಗೆ ಬೆಂಬಲ ಸೂಚಿಸಿ ರಾಜ್ಯಪಾಲರಿಗೆ ಪತ್ರ ಕೊಟ್ಟಿದ್ದಾರೆ.

ಈವರೆಗೆ ರಾಜೀನಾಮೆ ನೀಡಿರುವ 14 ಶಾಸಕರು:
ಕಾಂಗ್ರೆಸ್​ನಿಂದ(11): ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಮುನಿರತ್ನ, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಪ್ರತಾಪ್ ಗೌಡ ಪಾಟೀಲ್, ಆನಂದ್ ಸಿಂಗ್, ರಾಮಲಿಂಗಾ ರೆಡ್ಡಿ, ಬೈರತಿ ಬಸವರಾಜು ಮತ್ತು ರೋಷನ್ ಬೇಗ್
ಜೆಡಿಎಸ್​ನಿಂದ(3): ಹೆಚ್. ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ
ಬಿಜೆಪಿಗೆ ಬೆಂಬಲ ಸೂಚಿಸಿದ ಪಕ್ಷೇತರರು(2): ಹೆಚ್. ನಾಗೇಶ್, ಆರ್. ಶಂಕರ್

Comments are closed.