ಬೆಂಗಳೂರು: ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದ್ದು, ನಾಳೆಗೆ ಮುಂದೂಡಿದೆ.
ತಮ್ಮ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದು, ರಾಜೀನಾಮೆಗಳನ್ನು ಅಂಗೀಕರಿಸದೆ ಸತಾಯಿಸುತ್ತಿಸುದ್ದಾರೆ ಎಂದು ಅತೃಪ್ತ ಶಾಸಕರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ನಾಳೆ (ಶುಕ್ರವಾರ) ವಿಧಾನಸಭೆ ಅಧಿವೇಶನವೂ ಆರಂಭವಾಗಲಿದ್ದು, ಅತೃಪ್ತ ಶಾಸಕರ ಅರ್ಜಿಯ ವಿಚಾರಣೆಯೂ ನಾಳೆ ನಡೆಯಲಿದೆ. ಹೀಗಾಗಿ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ. ಅತೃಪ್ತ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸುತ್ತಿದ್ದಾರೆ.
ಅತೃಪ್ತ ಶಾಸಕರು ಸ್ಪೀಕರ್ ಅವರನ್ನು ಇಂದು ಸಂಜೆ 6 ಗಂಟೆಯೊಳಗೆ ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಹೀಗಾಗಿ ಮುಂಬಯಿಯಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರು ರಾಜ್ಯಕ್ಕೆ ಮರಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರೊಂದಿಗೆ ಸ್ಪೀಕರ್ ತಮ್ಮ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಅತೃಪ್ತ ಶಾಸಕರ ಆರೋಪಕ್ಕೂ ಉತ್ತರ ದೊರೆತಂತಾಗಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಸ್ಪೀಕರ್ ರಮೇಶ್ ಕುಮಾರ್ ಅವರೂ ಅತೃಪ್ತ ಶಾಸಕರ ಭೇಟಿಗೆ ಲಭ್ಯರಿರಬೇಕಾಗುತ್ತದೆ.
ಅಲ್ಲದೆ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ಕುರಿತು ಇಂದೇ ನಿರ್ಧಾರ ಕೈಗೊಳ್ಳಬೇಕು. ಆ ನಿರ್ಧಾರವನ್ನು ನಾಳೆ ತನಗೆ ತಿಳಿಸಬೇಕೆಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸ್ಪೀಕರ್ ಮುಂದೆ ಹಾಜರಾಗುವ ಅತೃಪ್ತ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದೂ ಸುಪ್ರೀಂ ಕೋರ್ಟ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಮುಂಬಯಿ ಬಿಟ್ಟು ಬೆಂಗಳೂರಿಗೆ ಹೊರಡಲು ಸಜ್ಜಾಗುತ್ತಿದ್ದಾರೆ. ಅವರಿಗಾಗಿ ವಿಶೇಷ ವಿಮಾನವನ್ನು ವ್ಯವಸ್ಥೆಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಅನರ್ಹತೆಗೆ ಶಾಸಕಾಂಗ ನಾಯಕ ಸಿದ್ದರಾಮಯ್ಯ ಸ್ಪೀಕರ್ ಗೆ ಶಿಫಾರಸು ಮಾಡಿದ್ದಾರೆ. ಈ ಇಬ್ಬರೂ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ತುರ್ತು ಬುಲಾವ್ ನೀಡಿದ್ದಾರೆ.
ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವನ್ನು ಉರುಳಿಸಲು ಬಿಜೆಪಿ ಹವಣಿಸುತ್ತಿದೆ ಎಂದು ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಆರೋಪಿಸಿದ್ದಾರೆ.
Comments are closed.