ಕರ್ನಾಟಕ

ಅವಿಶ್ವಾಸ ನಿರ್ಣಯ, ವಿಪ್ ಎಂದರೇನು?

Pinterest LinkedIn Tumblr


ಬೆಂಗಳೂರು(ಜುಲೈ.11): ಅತೃಪ್ತ ಶಾಸಕರ ಸಾಮೂಹಿಕ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೀಗ ನಾಳೆಯಿಂದಲೇ ಅಧಿವೇಶನ ಶುರುವಾಗಲಿದ್ದು, ಶಾಸಕರು ಸದನದಲ್ಲಿ ಹಾಜರಿರಬೇಕು. ಜತೆಗೆ ಸರ್ಕಾರದ ಪರವಾಗಿ ಮತ ಚಲಾಯಿಸಬೇಕು ಎಂದು ಮೈತ್ರಿ ಪಕ್ಷಗಳ ಶಾಸಕರಿಗೆ ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕ ಗಣೇಶ್​ ಹುಕ್ಕೇರಿ ಅವರು ವಿಪ್​ ಜಾರಿ ಮಾಡಿದ್ದಾರೆ.

ರಾಜ್ಯ ಸರ್ಕಾರದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಒಂದು ವೇಳೆ ಸದನಕ್ಕೆ ನೀವೂ ಗೈರಾದಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುವುದು ಎಂದು ವಿಪ್​ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಧಿವೇಶನದ ವೇಳೆ ಪ್ರತಿಪಕ್ಷದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಡ್ಡಯವಾಗಿ ಹಾಜರು ಇರಬೇಕೆಂದು ವಿಪ್‌ ಜಾರಿ ಮಾಡಲಾಗಿದೆ.

ಇನ್ನೊಂದೆಡೆ ಸಿಎಂ ಎಚ್​​.ಡಿ ಕುಮಾರಸ್ವಾಮಿ ನೇತೃತ್ವದ ಸರಕಾರದ ಧೋರಣೆ ಬಗ್ಗೆ ಅಸಮಾಧಾನಗೊಂಡಿರುವ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸುವ ನಿರೀಕ್ಷೆಯೂ ಇದೆ.

ಅವಿಶ್ವಾಸ ನಿರ್ಣಯ ಎಂದರೇನು?

ರಾಜ್ಯ ಸರಕಾರ ಜನಾದೇಶದಂತೆ ಅಧಿಕಾರದಲ್ಲಿ ಮುಂದುವರಿಯಬೇಕಾದರೆ ವಿಧಾನಸಭೆಯಲ್ಲಿ ಬಹುಮತ ಹೊಂದಿರಬೇಕು. ಒಂದು ವೇಳೆ ಆಡಳಿತಾರೂಢ ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಹುಮತ ಇಲ್ಲ ಎಂದು ಸಾಬೀತುಪಡಿಸಲು ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತವೆ. ಇಂಥ ನಿರ್ಣಯದ ಮಂಡನೆಗೆ ಯಾವುದೇ ಕಾರಣ ನೀಡುವ ಅಗತ್ಯವಿರುವುದಿಲ್ಲ. ವಿಪಕ್ಷ ಸದಸ್ಯರು ಪ್ರಸ್ತಾಪಿಸುವ ಅವಿಶ್ವಾಸ ನಿರ್ಣಯವನ್ನು ವಿಧಾನಸಭಾಧ್ಯಕ್ಷರು ಒಪ್ಪಿಕೊಂಡರೆ, ರಾಜ್ಯ ಸರ್ಕಾರವೂ ವಿಧಾನಸಭೆಯಲ್ಲಿ ತನ್ನ ಬಹುಮತ ಸಾಬೀತುಮಾಡಬೇಕಾಗುತ್ತದೆ.

ಅವಿಶ್ವಾಸ ನಿರ್ಣಯ ಹೇಗೆ ಕೆಲಸ ಮಾಡುತ್ತದೆ?
ವಿಧಾನಸಭೆಯಲ್ಲಿ ಯಾವುದೇ ಸದಸ್ಯರೂ ಕೂಡ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಕಾನೂನಿನ ಪ್ರಕಾರ ಅವಿಶ್ವಾಸ ನಿಲುವಳಿ ಮಂಡಿಸಬೇಕೆಂದಿರುವ ಸದಸ್ಯರು ಬೆಳಗ್ಗೆ 10 ಗಂಟೆಯೊಳಗೆ ಸ್ಪೀಕರ್ ಅವರಿಗೆ ಲಿಖಿತ ನೋಟೀಸ್ ನೀಡಬೇಕು. ಆ ಪತ್ರವನ್ನು ಸ್ಪೀಕರ್ ಅವರು ಸದನದಲ್ಲಿ ಓದುತ್ತಾರೆ. ಆ ನಿರ್ಣಯಕ್ಕೆ ಬೇಕಾದಷ್ಟೂ ವಿಧಾನಸಭಾ ಸದಸ್ಯರು ಬೆಂಬಲ ನೀಡಿದರೆ ಸ್ಪೀಕರ್ ಅವರು ನಿರ್ಣಯ ಮಂಡನೆಗೆ ಒಪ್ಪಿಗೆ ಸೂಚಿಸಬಹುದು. ನಿರ್ಣಯಕ್ಕೆ ಸ್ಪೀಕರ್ ಒಪ್ಪಿಗೆ ಮುದ್ರೆ ಹಾಕಿದ 10 ದಿನದೊಳಗೆ ಪ್ರಕ್ರಿಯೆ ಮುಕ್ತಾಯವಾಗಬೇಕಾಗುತ್ತದೆ. ಅವಿಶ್ವಾಸ ನಿರ್ಣಯದಲ್ಲಿ ಸರಕಾರವು ಬಹುಮತ ಸಾಬೀತುಪಡಿಸಲು ವಿಫಲವಾದಲ್ಲಿ ಸೋಲೊಪ್ಪಿಕೊಂಡು ರಾಜೀನಾಮೆ ಕೊಡಬೇಕಾಗುತ್ತದೆ.

ಇನ್ನು, ವಿಶ್ವಾಸ ಮತ ಯಾಚನೆ ಎಂಬ ಪ್ರಕ್ರಿಯೆಯೂ ನಿಮಗೆ ಗೊತ್ತಿರಬಹುದು. ಇದು ಸರಕಾರದ ಬಹುಮತ ಸಾಬೀತಿಗೆ ಮಂಡಿಸಲಾಗುವ ನಿರ್ಣಯವಾಗಿರುತ್ತದೆ. ಹೊಸದಾಗಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಇಂಥ ನಿರ್ಣಯ ಮಂಡನೆಯಾಗುತ್ತದೆ. ಮುಖ್ಯಮಂತ್ರಿಗಳು ವಿಶ್ವಾಸ ಮತ ಯಾಚಿಸುತ್ತಾರೆ. ವಿಪಕ್ಷದಿಂದ ಅವಿಶ್ವಾಸ ನಿರ್ಣಯ ಮಂಡನೆಯಾದಾಗ ಸರಕಾರವು ವಿಶ್ವಾಸ ಮತ ಯಾಚಿಸಿ ತನ್ನ ಬಹುಮತ ಸಾಬೀತು ಮಾಡಿ ತೋರಿಸಬಹುದು. ವಿಶ್ವಾಸ ಮತ ಯಾಚನೆ ಮತ್ತು ಅವಿಶ್ವಾಸ ನಿರ್ಣಯ ಎರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ.

ವಿಪ್ ಎಂದರೇನು?

ಬಿಜೆಪಿ ಮಂಡಿಸಲಿರುವ ಅವಿಶ್ವಾಸ ನಿರ್ಣಯದ ಯುದ್ಧವನ್ನು ಎದುರಿಸಲು ಕಾಂಗ್ರೆಸ್​ ಮತ್ತು ಜೆಡಿಎಸ್​​ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ. ಈ ವಿಪ್ ಎಂದರೇನು ಎಂಬ ಪ್ರಶ್ನೆ ಸಹಜವೇ. ವಿಪ್ ಎಂಬುದು ಪಕ್ಷಗಳು ತಮ್ಮ ಜನಪ್ರತಿನಿಧಿಗಳಿಗೆ ನೀಡುವ ಸೂಚನೆಯಾಗಿದೆ. ರಾಜ್ಯಸಭಾ ಚುನಾವಣೆ, ಪರಿಷತ್ ಚುನಾವಣೆ, ಅವಿಶ್ವಾಸ ನಿರ್ಣಯ ಮೊದಲಾದ ಸಂದರ್ಭಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಪಾಲ್ಗೊಳ್ಳಲು ತಮ್ಮ ಜನಪ್ರತಿನಿಧಿಗಳಿಗೆ ಪಕ್ಷಗಳು ವಿಪ್ ಜಾರಿ ಮಾಡುತ್ತವೆ.

ವಿಪ್​ನಲ್ಲಿ ಸಿಂಗಲ್ ಲೈನ್, ಡಬಲ್ ಲೈನ್ ಮತ್ತು ಥ್ರೀ ಲೈನ್ ವಿಪ್​ಗಳೆಂಬ ಮೂರು ವಿಧಗಳಿವೆ. ಸಿಂಗಲ್ ಲೈನ್ ವಿಪ್​ನಲ್ಲಿ ಮತದಾನದ ದಿನಾಂಕ ಮೊದಲಾದ ವಿವರವನ್ನು ನೋಟೀಸ್ ಮೂಲಕ ನೀಡಲಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವೇನೂ ಇರುವುದಿಲ್ಲ. ಡಬಲ್ ಲೈನ್ ವಿಪ್​ನಲ್ಲಿ ಮತದಾನ ಮಾಡಲು ಪಕ್ಷವು ಸ್ವಲ್ಪಮಟ್ಟಿಗೆ ಕಡ್ಡಾಯ ಮಾಡಿರುತ್ತದೆ. ಸರಿಯಾದ ಕಾರಣ ಕೊಟ್ಟು ಮತದಾನದಿಂದ ದೂರು ಉಳಿಯುವ ಸ್ವಾತಂತ್ರ್ಯವನ್ನ ಕೊಟ್ಟಿರಲಾಗುತ್ತದೆ. ಇನ್ನು, ಮೂರನೇಯದಾದ ಥ್ರೀಲೈನ್ ವಿಪ್​ನಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿರಲಾಗುತ್ತದೆ. ಥ್ರೀಲೈನ್ ವಿಪ್ ಪಡೆದವರು ಮತದಾನ ಮಾಡಲಿಲ್ಲವೆಂದರೆ ಪಕ್ಷದಿಂದಲೇ ಅಮಾನತಾಗುವ ಸಾಧ್ಯತೆ ಇರುತ್ತದೆ. ಪಕ್ಷಗಳು ಕೊಡುವ ವಿಪ್ ಸಾಮಾನ್ಯವಾಗಿ ಥ್ರೀ ಲೈನ್ ವಿಪ್ ಆಗಿರುತ್ತದೆ.

Comments are closed.