ಬೆಂಗಳೂರು(ಜುಲೈ.12): ಐಎಂಎ ಪ್ರಕರಣದಲ್ಲಿ ಬಂಧನವಾಗಿರುವ ನಗರ ಜಿಲ್ಲಾಧಿಕಾರಿ ಬಿ.ಎಂ ವಿಜಯ ಶಂಕರ್ ಅವರಿಂದ 2.5 ಕೋಟಿ ಜಪ್ತಿ ಮಾಡಲಾಗಿದೆ. ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದ ಎಸ್‌ಐಟಿ ಅಧಿಕಾರಿಗಳು, ವಿಚಾರಣೆ ವೇಳೆ ಈ ಪ್ರಮಾಣ ಹಣ ಜಪ್ತಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಪ್ರಕರಣ ಸಂಬಂಧ ಐಎಂಎ ಕಂಪನಿಗೆ ಕ್ಲೀನ್ ಚಿಟ್ ನೀಡಲು 1.5 ಕೋಟಿ ಹಣ ಪಡೆದ ಆರೋಪದ ಮೇಲೆ ಜಿಲ್ಲಾಧಿಕಾರಿಗಳನ್ನು ಎಸ್‌ಐಟಿ ಬಂಧಿಸಿತ್ತು. ಈ ಮುನ್ನವೇ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರಿಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಅದರಂತೆ ಇಂದು ಎಸ್‌ಐಟಿ ಕಚೇರಿಗೆ ಬಂದ ಜಿಲ್ಲಾಧಿಕಾರಿಯನ್ನು ಡಿಸಿಪಿ ಗಿರೀಶ್ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿತ್ತು.
ಐಎಂಎ ಜ್ಯುವೆಲರಿ ಸಂಸ್ಥೆ ವಿರುದ್ಧ ತನಿಖೆ ನಡೆಸುವಂತೆ ಈ ಹಿಂದೆ ಸರ್ಕಾರ ಉಪ ವಿಭಾಗಾಧಿಕಾರಿ ನಾಗರಾಜ್ ಅವರನ್ನು ನೇಮಿಸಿತ್ತು. ಆದರೆ, ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ನಿಂದ ಎಸಿ ನಾಗರಾಜ್ 4.5 ಕೋಟಿ ಲಂಚ ಪಡೆದು, ಸರ್ಕಾರಕ್ಕೆ ಸುಳ್ಳು ವರದಿ ಸಲ್ಲಿಸಿದ್ದರು. ಇದೇ ವಿಚಾರವಾಗಿ ಕಳೆದ ಮೂರು ದಿನಗಳ ಹಿಂದೆ ಎಸ್‌ಐಟಿ ನಾಗರಾಜ್ ಅವರನ್ನು ವಿಚಾರಣೆ ಕರೆದು, ಹಣ ಪಡೆದ ಆರೋಪ ಸತ್ಯವೆಂದು ರುಜುವಾತಾದ ಮೇಲೆ ಅವರನ್ನು ಬಂಧಿಸಿತ್ತು. ಇವರ ಜೊತೆಗೆ ಗ್ರಾಮ ಲೆಕ್ಕಿಗ ಮಂಜುನಾಥ್ ಎಂಬುವವರನ್ನು ವಶಕ್ಕೆ ಪಡೆಯಲಾಗಿತ್ತು.
ಎಸಿ ನಾಗರಾಜ್ ಜಿಲ್ಲಾಧಿಕಾರಿ ವಿಜಯಶಂಕರ್ ಅಧೀನದಲ್ಲೇ ಬರುವ ಅಧಿಕಾರಿ. ಐಎಂಎ ಸಂಸ್ಥೆಯಿಂದ 1.5 ಕೋಟಿ ಹಣ ಲಂಚ ಪಡೆದು ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದ ಆರೋಪದ ಮೇಲೆ ಡಿಸಿ ವಿಜಯ್ ಶಂಕರ್ನನ್ನು ಬಂಧಿಸಲಾಗಿದೆ. ಐಎಂಎ ವಂಚನೆಯಲ್ಲಿ ಡಿಸಿಗೂ ಪಾಲುದಾರಿಕೆ ಇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಬಿಲ್ಡರ್ ಕೃಷ್ಣಮೂರ್ತಿ ಎಂಬುವವರನ್ನು ಎಸ್‌ಐಟಿ ವಿಚಾರಣೆ ನಡೆಸುತ್ತಿದೆ.
Comments are closed.