ಕರ್ನಾಟಕ

ಬಿಜೆಪಿಯಲ್ಲೂ ಅತೃಪ್ತರು ಇದ್ದಾರೆ; ಹಾಗಾಗಿಯೇ ಯಡಿಯೂರಪ್ಪಗೆ ರಿವರ್ಸ್​ ಆಪರೇಷನ್​​ ಭಯ; ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು(ಜುಲೈ.12): ಬಿಜೆಪಿಗೂ ರಿವರ್ಸ್​​ ಆಪರೇಷನ್​​ ಭಯವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ವ್ಯಂಗ್ಯವಾಡಿದ್ದಾರೆ. “ಅಲ್ಲದೇ ನಮ್ಮಲ್ಲಿದ್ದ ಅತೃಪ್ತರು ಈಗಾಗಲೇ ಮುಂಬೈಗೆ ಹೋಗಿದ್ದಾರೆ. ಬಿಜೆಪಿಯಲ್ಲೂ ಅತೃಪ್ತರಿದ್ದು, ಯಾವಾಗ ರಿವರ್ಸ್​​ ಆಪರೇಷನ್​​​ಗೆ ಒಳಗಾಗುತ್ತಾರೋ? ಎಂಬ ಭಯ ಬಿ.ಎಸ್​ ಯಡಿಯೂರಪ್ಪನವರಿಗೂ ಇದೆ” ಎಂದು ಗುಟುರಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, “ನಾನು ಯಾವಾಗಲೂ ಖುಷಿಯಾಗಿ ಇರ್ತೀನಿ. ಜನಸೇವೆ ಮಾಡೋಕೆ ಯಾರೂ ನನ್ನ ಕರೆದಿಲ್ಲ. ನಾನೇ ಬಂದಿರೋದು. ಅಳುತ್ತಾ ಜನಸೇವೆ ಮಾಡಬಾರದು. ಯಾವಾಗಲೂ ಖುಷಿಯಲ್ಲೇ ಆಡಳಿತ ನಡಸಬೇಕಲ್ಲವೇ?” ಎಂದು ಪ್ರಶ್ನಿಸಿದರು.

ನನಗೆ ಯಾವುದೇ ಆಪರೇಷನ್​​ನಲ್ಲಿ ನಂಬಿಕೆ ಇಲ್ಲ. ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು, ವಿಶ್ವಾಸಮತ ಯಾಚನೆ ನಿರ್ಧಾರ ಪ್ರಕಟಿಸಿದ್ದಾರೆ. ನಾನು ಸುಪ್ರೀಂಕೋರ್ಟ್​​ ತೀರ್ಪಿನ ಬಗ್ಗೆ ಏನು ಮಾತಾಡೋಲ್ಲ. ರಾಜೀನಾಮೆ ಸ್ವೀಕರಿಸೋದು ಯಾರು? ಶಾಸಕರ ಅನರ್ಹಗೊಳಿಸೋರು ಯಾರು? ಸ್ಪೀಕರ್​​ ಅಲ್ಲವೇ. ನನಗಿಷ್ಟೇ ಗೊತ್ತಿರೋದು ಎಂದರು.

ರಾಜಕಾರಣ ಇರೋದು ಜನ ಸೇವೆ ಮಾಡಲು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗುತ್ತಾ? ಎಂದು ಹೇಗೆ ಹೇಳಲು ಸಾಧ್ಯ. ನಾವು ಈ ಬಗ್ಗೆ ಚರ್ಚೆ ಮಾಡಿದ ಬಳಿಕವೇ ಈ ತೀರ್ಮಾನ ಮಾಡಲಾಗಿದೆ. ರೋಷನ್ ಬೇಗ್ ಅವರನ್ನು ಅಮಾನತು ಮಾಡಲಾಗಿದೆ. ರಾಮಲಿಂಗಾರೆಡ್ಡಿ ಜತೆ ಮಾತುಕತೆ ನಡೆಸಲಾಗುತ್ತಿದೆ. ಎಂಟಿಬಿ ನಾಗರಾಜ್​​ ಎದೆ ಬಗೆದರೇ ಸಿದ್ದರಾಮಯ್ಯ ಎನ್ನುತ್ತಿದ್ದರು. ಈಗ ಎದೆ ಬಗೆಯಲು ಸಾಧ್ಯವಿಲ್ಲ ಎಂದು ಕುಹಕವಾಡಿದರು.

ಇನ್ನೊಂದೆಡೆ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನೀಡಿ ರಾಜಕೀಯ ಪರಿಸ್ಥಿತಿ ಹದಗೆಟ್ಟಿರುವ ಸಂದರ್ಭದಲ್ಲಿ ಮುಖ್ಯ ಮಂತ್ರಿಯಾಗಲು ಬಯಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಆಪ್ತರ ವಲಯದಲ್ಲಿ ಈ ವಿಷಯ ಪ್ರಸ್ತಾಪ ಮಾಡಲಾಗಿದೆಯಂತೆ!

ಒಂದು ವೇಳೆ ವಿಧಾನಸಭೆಗೆ ಚುನಾವಣೆ ನಡೆದು ನಮ್ಮ ಪಕ್ಷಕ್ಕೆ ಬಹುಮತ ಬಂದರೆ ಆಗ ನೋಡೋಣ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರ ತೂಗುಯ್ಯಾಲೆಯಲ್ಲಿದೆ.ಈ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ಮಾಡಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಕುರಿತಂತೆ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

Comments are closed.