ಬೆಂಗಳೂರು(ಜುಲೈ 13): ಅಸಮಾಧಾನಿತ ಶಾಸಕರ ಪೈಕಿ ಎಂಟಿಬಿ ನಾಗರಾಜ್ ಅವರು ರಾಜೀನಾಮೆ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಮೈತ್ರಿ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ತಮ್ಮ ಜೊತೆ ರಾಜೀನಾಮೆ ನೀಡಿದ ಡಾ| ಕೆ. ಸುಧಾಕರ್ ಅವರ ಜೊತೆ ಮಾತನಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇದರೊಂದಿಗೆ ಡಾ. ಸುಧಾಕರ್ ಅವರ ನಿರ್ಧಾರದ ಮೇಲೆ ಎಂಟಿಬಿ ನಾಗರಾಜ್ ನಿರ್ಧಾರ ಅವಲಂಬಿತವಾಗಿದೆ.
ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಇವತ್ತು ಮೈತ್ರಿಪಕ್ಷಗಳ ನಾಯಕರ ದಂಡೇ ನೆರೆದಿತ್ತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಮೊದಲಾದ ಮುಖಂಡರ ಸಮ್ಮುಖದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ತಾನು ಹಾಗೂ ಸುಧಾಕರ್ ಒಟ್ಟಿಗೆ ರಾಜೀನಾಮೆ ನೀಡಿದ್ದರಿಂದ ಇಬ್ಬರೂ ಸೇರಿಯೇ ತೀರ್ಮಾನ ತೆಗೆದುಕೊಳ್ಳಬೇಕು. ತಾನಂತೂ ರಾಜೀನಾಮೆ ಹಿಂಪಡೆಯಲು ನಿರ್ಧರಿಸಿಯಾಗಿದೆ. ನಾಳೆ ಮಧ್ಯಾಹ್ನದೊಳಗೆ ಸುಧಾಕರ್ ಅವರನ್ನು ಸಂಪರ್ಕಿಸಿ ಅವರ ಮನವೊಲಿಸುತ್ತೇನೆ. ಆ ಬಳಿಕ ಇಬ್ಬರೂ ಒಟ್ಟಿಗೆ ಸೇರಿ ಸೋಮವಾರ ರಾಜೀನಾಮೆ ಹಿಂಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಸುಧಾಕರ್ ಬರದಿದ್ದರೆ ಎಂಟಿಬಿ ಇಲ್ಲ?
ಆದರೆ, ಕಾವೇರಿ ನಿವಾಸದಿಂದ ಹೊರಬಂದ ಬಳಿಕ ಮಾಧ್ಯಮಗಳು ಮತ್ತೊಮ್ಮೆ ಅವರನ್ನು ಈ ವಿಚಾರದ ಬಗ್ಗೆ ಕೆದಕಿದವು. ಒಂದು ವೇಳೆ ಸುಧಾಕರ್ ಅವರು ರಾಜೀನಾಮೆ ವಾಪಸ್ ಪಡೆಯಲು ನಿರಾಕರಿಸಿದರೆ ಏನು ಮಾಡುತ್ತೀರಾ ಎಂಬ ಪ್ರಶ್ನೆಗೆ ಹೊಸಕೋಟೆ ಶಾಸಕರು, ತಾನೊಬ್ಬನೇ ಕಾಂಗ್ರೆಸ್ನಲ್ಲಿದ್ದು ಏನ್ ಮಾಡಲಿ ಎಂಬ ಮಾರ್ಮಿಕ ಮತ್ತು ನಿಗೂಢ ಉತ್ತರ ಕೊಟ್ಟು ಹೋದರು.
ಇವತ್ತು ಸಂಜೆಯವರೆಗೂ ಬೆಂಗಳೂರಿನಲ್ಲೇ ಇದ್ದ ಚಿಕ್ಕಬಳ್ಳಾಪುರ ಶಾಸಕ ಡಾ| ಕೆ. ಸುಧಾಕರ್ ಅವರು ಇದ್ದಕ್ಕಿದ್ದಂತೆ ತಮ್ಮೆರಡೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಕ್ಕದೇ ಹೋದರು. ಅವರು ದೆಹಲಿಗೆ ಹೋದರೆಂಬ ಸುದ್ದಿ ತರುವಾಯ ಸಿಕ್ಕಿತು. ನಾಳೆ, ಸುಧಾಕರ್ ಅವರು ಮುಂಬೈನಲ್ಲಿರುವ ಇತರ ಅತೃಪ್ತ ಶಾಸಕರ ಗುಂಪನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.
ಎಂಟಿಬಿ ನಾಗರಾಜ್ ಅವರ ಮನವೊಲಿಕೆಗೆ ಡಾ| ಕೆ. ಸುಧಾಕರ್ ಅವರು ಒಪ್ಪಿದರೆ ಒಟ್ಟೊಟ್ಟಿಗೆ ಎರಡು ಕಾಂಗ್ರೆಸ್ ವಿಕೆಟ್ಗಳು ಉಳಿಯಲಿವೆ. ಇಲ್ಲದಿದ್ದರೆ ಕಾಂಗ್ರೆಸ್ನ ಸಂಧಾನದ ಸರ್ಕಸ್ ವಿಫಲವಾಗುತ್ತದೆ. ಸುಧಾಕರ್ ಒಪ್ಪದಿದ್ದರೆ ಎಂಟಿಬಿ ನಾಗರಾಜ್ ಅವರೂ ಕೂಡ ನಾಳೆ ಮುಂಬೈಗೆ ಹೋದರ ಹೋಗಬಹುದು.
ಇತ್ತ, ವಿಶ್ವಾಸ ಮತ ಯಾಚನೆಯ ದಿನದೊಳಗೆ ಎಲ್ಲಾ ಅಸಮಾಧಾನಿತ ಶಾಸಕರು ಮೈತ್ರಿಪಾಳಯದಲ್ಲೇ ಇರಲಿದ್ಧಾರೆ ಎಂಬ ವಿಶ್ವಾಸವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಎಂಟಿಬಿ ನಾಗರಾಜ್ ಅವರಿಗೆ ಸಿದ್ದರಾಮಯ್ಯ ಅವರೇ ರಾಜಕೀಯ ಗುರು ಆಗಿದ್ಧಾರೆ. ತಮ್ಮ ಎದೆ ಬಗೆದರೆ ಅಲ್ಲಿ ಸಿದ್ರಾಮಯ್ಯ ಇರುತ್ತಾರೆ ಎಂದು ಎಂಟಿಬಿ ನಾಗರಾಜ್ ಅನೇಕ ಬಾರಿ ಹೇಳಿಕೊಂಡಿದ್ದುಂಟು. ಇದೇ ವಿಚಾರ ಇಟ್ಟುಕೊಂಡು ಸಿದ್ದರಾಮಯ್ಯ ಅವರು ಎಂಟಿಬಿಯ ಮನವೊಲಿಸುವಲ್ಲಿ ಒಂದು ಮಟ್ಟಕ್ಕೆ ಯಶಸ್ವಿಯಾಗಿದ್ದಾರೆ. ಎಂಟಿಬಿ ಹಾದಿಗೆ ಬರಲು ಈಗ ಉಳಿದಿರುವ ತಡೆ ಸುಧಾಕರ್ ಮಾತ್ರವೇ.
ಈಗ ಡಾ| ಕೆ. ಸುಧಾಕರ್ ಅವರು ಒಪ್ಪಿದರೆ ಒಟ್ಟೊಟ್ಟಿಗೆ ಎರಡು ಕಾಂಗ್ರೆಸ್ ವಿಕೆಟ್ಗಳು ಉಳಿಯಲಿವೆ. ಇಲ್ಲದಿದ್ದರೆ ಕಾಂಗ್ರೆಸ್ನ ಸಂಧಾನದ ಸರ್ಕಸ್ ವಿಫಲವಾಗುತ್ತದೆ. ಆದರೆ, ವಿಶ್ವಾಸ ಮತ ಯಾಚನೆಯ ದಿನದೊಳಗೆ ಎಲ್ಲಾ ಅಸಮಾಧಾನಿತ ಶಾಸಕರು ಮೈತ್ರಿಪಾಳಯದಲ್ಲೇ ಇರಲಿದ್ಧಾರೆ ಎಂಬ ವಿಶ್ವಾಸವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
Comments are closed.