ಆನಂದ್ ಸಿಂಗ್
ನವದೆಹಲಿ/ಬೆಂಗಳೂರು(ಜುಲೈ 13): ರಾಜೀನಾಮೆ ಅಂಗೀಕರಿಸಲು ಬೇಕಂತಲೇ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಮೈತ್ರಿ ಪಕ್ಷಗಳ ಇನ್ನೂ 5 ಅಸಮಾಧಾನಿತ ಶಾಸಕರು ಸುಪ್ರೀಂ ಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ. ಇದರೊಂದಿಗೆ 15 ಶಾಸಕರ ಅರ್ಜಿ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾದಂತಾಗಿದೆ. ರಾಜೀನಾಮೆ ನೀಡಿದ 16 ಶಾಸಕರ ಪೈಕಿ ರಾಮಲಿಂಗಾ ರೆಡ್ಡಿ ಹೊರತುಪಡಿಸಿ ಎಲ್ಲರೂ ಸ್ಪೀಕರ್ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.
ಇವತ್ತು ಆನಂದ್ ಸಿಂಗ್, ಮುನಿರತ್ನ, ಡಾ| ಕೆ. ಸುಧಾಕರ್, ಎಂಟಿಬಿ ನಾಗರಾಜ್ ಮತ್ತು ರೋಷನ್ ಬೇಗ್ ಅವರು ವಕೀಲರ ಮೂಲಕ ನ್ಯಾಯಾಲಯದಲ್ಲಿ ಸ್ಪೀಕರ್ ವಿರುದ್ಧ ದೂರು ಅರ್ಜಿ ಸಲ್ಲಿಸಿದ್ದಾರೆ.
ಖುದ್ದಾಗಿ ವ್ಯಕ್ತಿಗತವಾಗಿ ಹೋಗಿ ಕ್ರಮಬದ್ಧ ರೀತಿಯಲ್ಲೇ ರಾಜೀನಾಮೆ ಸಲ್ಲಿಕೆ ಮಾಡಿದರೂ ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸುತ್ತಿಲ್ಲ. ಪಕ್ಷದ ವಿಪ್ಗೆ ಒಳಪಡಿಸಿ ಶಾಸಕರ ಅನರ್ಹತೆಗೊಳಿಸುವ ಉದ್ದೇಶದಿಂದ ಸ್ಪೀಕರ್ ಅವರು ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡುತ್ತಿದ್ಧಾರೆ ಎಂದು ಅಸಮಾಧಾನಿತ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
15 ಶಾಸಕರ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಗೆತ್ತುಕೊಳ್ಳಲಿದೆ.
ಇದೇ ವೇಳೆ, ಒಬ್ಬ ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಅವರು ವಾಪಸ್ ಮೈತ್ರಿಪಾಳಯ ಸೇರಿಕೊಳ್ಳುವ ಮನಸ್ಸು ಮಾಡಿದ್ದಾರೆನ್ನಲಾಗಿದೆ. ಆದರೆ, ಡಾ| ಕೆ. ಸುಧಾಕರ್ ಅವರೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಬಳಿ ಅವರು ತಿಳಿಸಿದ್ದಾರೆನ್ನಲಾಗಿದೆ. ಆದರೆ, ಒಂದು ಮೂಲದ ಪ್ರಕಾರ ಅವರು ರಾಜೀನಾಮೆ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಜೀನಾಮೆ ನೀಡಿದ ಇತರ ಸಹಶಾಸಕರ ಮನವೊಲಿಸುವ ಕೆಲಸ ಮಾಡುವುದಾಗಿಯೂ ಅವರು ಹೇಳಿದ್ದಾರೆನ್ನಲಾಗಿದೆ.
16 ಶಾಸಕರ ರಾಜೀನಾಮೆ ಜೊತೆಗೆ ಇಬ್ಬರು ಪಕ್ಷೇತರರು ಮೈತ್ರಿ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದುಕೊಂಡಿರುವುದು ಬಿಜೆಪಿಯ ಬಲ ಹಿಗ್ಗಿದಂತಾಗಿದೆ. ಯಥಾಸ್ಥಿತಿ ಮುಂದುವರಿದರೆ ವಿಶ್ವಾಸಮತ ಯಾಚನೆಯಲ್ಲಿ ಸಿಎಂ ಕುಮಾರಸ್ವಾಮಿ ಸೋಲನುಭವಿಸಿ ಸರ್ಕಾರ ಪತನಗೊಳ್ಳಬಹುದು. ಬಿಜೆಪಿಗೆ ಮತ್ತೊಮ್ಮೆ ಸರ್ಕಾರ ರಚಿಸುವ ಅವಕಾಶ ಒದಗಬಹುದು.
ಅತೃಪ್ತ ಪದ ಬಳಕೆಗೆ ಪತ್ನಿಯರ ಆಕ್ಷೇಪ:
ಇದೇ ವೇಳೆ, ಮೈತ್ರಿ ಸರ್ಕಾರದೊಳಗೆ ಅಸಮಾಧಾನ ಹೊಂದಿರುವ ಹಾಗೂ ರಾಜೀನಾಮೆ ನೀಡಿದ ಶಾಸಕರನ್ನು ಮಾಧ್ಯಮಗಳಲ್ಲಿ ‘ಅತೃಪ್ತರು’ ಎಂಬ ಪದ ಬಳಕೆಯಾಗುತ್ತಿದೆ. ಈ ಪದ ಬಳಕೆಯಿಂದ ಅವಮಾನವಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ಶಾಸಕರ ಪತ್ನಿಯರು ಹೈಕೋರ್ಟ್ನಲ್ಲಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಅತೃಪ್ತರು ಎಂಬ ಪದ ಬಳಕೆಯನ್ನು ನಿರ್ಬಂಧಿಸುವಂತೆ ಉಚ್ಚ ನ್ಯಾಯಾಲಯಕ್ಕೆ ಕೋರಿಕೆ ಮಾಡಿಕೊಂಡಿದ್ದಾರೆ. ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ಈ ಅರ್ಜಿಯ ವಿಚಾರಣೆ ಬರುವ ನಿರೀಕ್ಷೆ ಇದೆ.
Comments are closed.