ಕರ್ನಾಟಕ

ಸುಪ್ರೀಂ ಕೋರ್ಟಿನ ಆದೇಶ 15 ಮಂದಿ ಅತೃಪ್ತ ಶಾಸಕರಿಗೆ ನೈತಿಕ ಬಲ ತಂದುಕೊಟ್ಟಿದೆ: ಬಿಎಸ್ ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: 15 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಕುರಿತು ಸಂವಿಧಾನದ ಆಶಯಕ್ಕೆ ಸರಿಯಾಗಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದ್ದು, ಕೋರ್ಟಿನ ಆದೇಶ ಅತೃಪ್ತ ಶಾಸಕರಿಗೆ ನೈತಿಕ ಬಲ ತಂದುಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಅತೃಪ್ತ ಶಾಸಕರ ರಾಜಿನಾಮೆ ಕುರಿತು ಇಂದು ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟಿಸಿದ್ದು, ನಿರ್ದಿಷ್ಟ ಸಮಯದಲ್ಲಿ ರಾಜಿನಾಮೆ ಬಗ್ಗೆ ನಿರ್ಧಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದ್ದು ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು ಎಂದು ಅವರು ಬಣ್ಣಿಸಿದರು.

ವಿಪ್ ಅತೃಪ್ತ ಶಾಸಕರಿಗೆ ಅನ್ವಯವಾಗದಿರುವುದರಿಂದ ಕೋರ್ಟ್ ಆದೇಶ ನೀಡಿರುವುದರಿಂದ ನಾಳೆ ವಿಧಾನಸಭೆಯಲ್ಲಿ ನಡೆಯುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ 15 ಮಂದಿ ಅತೃಪ್ತ ಶಾಸಕರು ಹಾಜರಾಗಲಿಕ್ಕಿಲ್ಲ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಹುಮತದ ವಿಶ್ವಾಸ ಕಳೆದುಕೊಂಡು ರಾಜೀನಾಮೆ ನೀಡಲಿದ್ದಾರೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿಯವರು ಬಹುಮತ ಕಳೆದುಕೊಂಡಿದ್ದಾರೆ. ಬಹುಮತ ಇಲ್ಲದಿರುವಾಗ ನಾಳೆ ಅವರು ರಾಜೀನಾಮೆ ನೀಡಲೇಬೇಕು. ಇದು ಕೇವಲ ಮಧ್ಯಂತರ ಆದೇಶವಷ್ಟೆ, ಸ್ಪೀಕರ್ ಅವರ ಅಧಿಕಾರವನ್ನು ಸುಪ್ರೀಂ ಕೋರ್ಟ್ ಭವಿಷ್ಯದಲ್ಲಿ ನಿರ್ಧರಿಸಲಿದೆ ಎಂದು ಹೇಳಿದರು.

ಎಚ್‌ಡಿ ಕುಮಾರಸ್ವಾಮಿಯವರಿಂದಾಗಿ ರಾಜ್ಯದಲ್ಲಿ ಅರಾಜಕತೆ ಇದೆ, ಈ ತೀರ್ಪಿನ ನಂತರ ಅವರು ತಕ್ಷಣ ರಾಜೀನಾಮೆ ನೀಡಬೇಕು, ವಿಶ್ವಾಸ ಮತಕ್ಕಾಗಿ ಕಾಯಬಾರದು ಎಂದು ಹೇಳಿದರು.

Comments are closed.