ಬೆಂಗಳೂರು: ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಕ್ರಿಯಾ ಲೋಪ ಎತ್ತಿದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ನ ಮಧ್ಯಂತರ ಆದೇಶದಲ್ಲಿ ನಮ್ಮ ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡುವ ನನ್ನ ಹಕ್ಕು ಮತ್ತು ಅಧಿಕಾರಕ್ಕೆ ಚ್ಯುತಿ ಬಂದಿದೆ. ಇದು ಇತ್ಯರ್ಥ ಆಗುವವರೆಗೂ ವಿಶ್ವಾಸಮತ ಯಾಚನೆಗೆ ಅವಕಾಶ ಕೊಡಬಾರದು ಎಂದು ಹೇಳಿದರು.
ಇದು ಕಲಾಪದಲ್ಲಿ ಗಲಾಟೆಗೆ ಅವಕಾಶವಾಗಿದ್ದರಿಂದ, ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ಕುಮಾರ್ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.
ಇದಕ್ಕೂ ಮುನ್ನ ಸಿಎಂ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯ ಸಂದರ್ಭ ಒದಗಿ ಬಂದ ಕುರಿತು ವಿವರಿಸಿತ್ತಾ, ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತು ಪ್ರಸ್ತಾಪಿಸಿದರು. ಈ ಹಂತದಲ್ಲಿ ಸಿದ್ದರಾಮಯ್ಯ ಕ್ರಿಯಾ ಲೋಪ ಎತ್ತಿದರು.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 52ನೇ ತಿದ್ದುಪಡಿ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು (ಷೆಡ್ಯೂಲ್ 10) ಜಾರಿಗೊಳಿಸಲಾಗಿದೆ. ಇದುವರೆಗೂ ಈ ಷೆಡ್ಯೂಲ್ ಅನ್ನು ತೆಗೆದುಹಾಕಲಾಗಿಲ್ಲ. ಇದಕ್ಕೆ ಯಾವುದೇ ತಿದ್ದುಪಡಿ ತಂದಿಲ್ಲ. ಹಾಗಾಗಿ ಈ ಕಾಯ್ದೆ ಇನ್ನೂ ಜಾರಿಯಲ್ಲಿದೆ. ಇದರ ಆಧಾರದಲ್ಲಿ ತನ್ನ ಪಕ್ಷದ ಸದಸ್ಯರಿಗೆ ವಿಪ್ ಕೊಡಲು ಅವಕಾಶವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಶ್ವಾಸಮತ ಯಾಚನೆಯ ಒಂದು ವಾಕ್ಯದ ಪ್ರಸ್ತಾವನೆಯನ್ನು ಮಂಡಿಸಿದ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಾ ಪಕ್ಷಾಂತರ ನಿಷೇಧ ಕಾಯ್ದೆ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಕ್ರಿಯಾ ಲೋಪ ಎತ್ತಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
1967ರಲ್ಲಿ ಹರಿಯಾಣದ ಗಯಾಲಾಲ್ ಎಂಬ ಕಾಂಗ್ರೆಸ್ ಶಾಸಕರು ಒಂದೇ ದಿನದಲ್ಲಿ ಕಾಂಗ್ರೆಸ್ನಿಂದ ಯುನೈಟೆಡ್ ಫ್ರಂಟ್ಗೆ ಮತ್ತು ಯುನೈಟೆಡ್ ಫ್ರಂಟ್ನಿಂದ ಕಾಂಗ್ರೆಸ್ ಮತ್ತೆ ಕಾಂಗ್ರೆಸ್ನಿಂದ ಯುನೈಟೆಡ್ ಫ್ರಂಟ್ಗೆ ಪಕ್ಷಾಂತರ ಮಾಡುತ್ತಾರೆ. ಅಂದಿನಿಂದ ಆರಂಭವಾಗಿದ್ದ ಪಕ್ಷಾಂತರ ನಿಷೇಧ ಕಾಯ್ದೆ ರೂಪಿಸುವ ಪ್ರಯತ್ನ 1985ರಲ್ಲಿ ಸಫಲವಾಯಿತು ಎಂದರು.
ಇಂದು ಈ ಕಾಯ್ದೆ ಕರ್ನಾಟಕ ರಾಜಕಾರಣದ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದು ಹೇಳಿದ ಸಿದ್ದರಾಮಯ್ಯ, ಸಂವಿಧಾನಬದ್ಧವಾಗಿ ರಚನೆಗೊಂಡಿರುವ ಸರ್ಕಾರವನ್ನು ಅಭದ್ರಗೊಳಿಸುವ ಕುಟಿಲ ಪ್ರಯತ್ನ ನಡೆಯುತ್ತಿದೆ. ಸಾಮೂಹಿಕವಾಗಿ ಶಾಸಕರು ಹೋಗಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ವಿಪ್ ಕೊಡಲು ಅಧಿಕಾರ ಇದೆ. ಬಿ ಫಾರಂ ತೆಗೆದುಕೊಂಡು ಗೆದ್ದವರೆಲ್ಲರಿಗೂ ವಿಪ್ ಜಾರಿ ಮಾಡಬಹುದಾಗಿದೆ. ವಿಪ್ ಕೊಡುವ ಅಧಿಕಾರ ಚ್ಯುತಿಯಾದಂತೆ ಸುಪ್ರೀಂಕೋರ್ಟ್ ಆದೇಶ ಬಂದಿದೆ. ಒಂದು ಪ್ಯಾರಾದಲ್ಲಿ ಅದನ್ನು ಹೇಳಿದ್ದಾರೆ. 10 ಜನ ಸದಸ್ಯರು ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ಮತ್ತು ಇತರೆ 9 ಮಂದಿ ಹೂಡಿದ್ದ ದಾವೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಸ್ಪೀಕರ್, ಸಿಎಂ ಎಚ್.ಡಿ. ಕುಮಾರಸ್ವಾಮಿ, ಭಾರತ ಸರ್ಕಾರವನ್ನು ಕ್ರಮವಾಗಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಆದರೆ ಕಾಂಗ್ರೆಸ್ ಅನ್ನು ಪ್ರತಿವಾದಿಗಳನ್ನಾಗಿ ಮಾಡಿಲ್ಲ. 32ನೇ ಪರಿಚ್ಛೇದ, ರಾಜೀನಾಮೆ ಅಂಗೀಕರಿಸಲು, ಅನರ್ಹತೆ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಇದರಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ರಾಜೀನಾಮೆ ಕೊಟ್ಟಿದ್ದೇವೆ ಎಂದು ಹೇಳಿರುವ ತಮ್ಮ ಅಧಿಕಾರಕ್ಕೆ ಚ್ಯುತಿಯಾಗಿದೆ ಎಂದು ಕ್ರಿಯಾ ಲೋಪ ಆಗಿರುವ ಬಗ್ಗೆ ಮಾಹಿತಿ ನೀಡಿದರು.
Comments are closed.