ಬೆಂಗಳೂರು(ಜುಲೈ 21): ಮೈತ್ರಿ ಸರ್ಕಾರದ ಹಣೆಬರಹ ನಿರ್ಧಾರಕ್ಕೆ ನಾಳೆ ಡೇಟ್ ಫಿಕ್ಸ್ ಆಗಿದೆ. ಸೋಮವಾರವೇ ವಿಶ್ವಾಸ ಮತ ಯಾಚನೆ ಮಾಡುವಂತೆ ಸ್ಪೀಕರ್ ಅವರು ಶುಕ್ರವಾರವೇ ಸೂಚನೆ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಸಮಸ್ಯೆ ಇರುವ ಸುದ್ದಿ ಈ ನಡುವೆ ಕೇಳಿ ಬಂದಿದೆ. ಇದು ವಿಪಕ್ಷಕ್ಕೆ ಚಿಂತೆಗೀಡು ಮಾಡಿದೆ. ಅನಾರೋಗ್ಯ ಕಾರಣದಿಂದ ಮುಖ್ಯಮಂತ್ರಿಯೇ ಗೈರಾಗಿಬಿಟ್ಟರೆ ಸೋಮವಾರ ವಿಶ್ವಾಸ ಮತ ನಡೆಯದೇ ಹೋದರೆ ಏನು ಗತಿ ಎಂಬ ಭಯ ಬಿಜೆಪಿಗೆ ಇದೆ. ಆದರೆ, ಸಿಎಂ ಗೈರಾದರೂ ಸ್ಪೀಕರ್ ಅವರು ವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಬಹುದೆಂಬ ವಿಶ್ವಾಸದಲ್ಲಿಯೂ ಇದ್ದಾರೆ.
ಕುಮಾರಸ್ವಾಮಿ ಆರೋಗ್ಯ ನೆಪದಿಂದ ರಾಜೀನಾಮೆ ನೀಡಲು ತಡ ಮಾಡಿದರೆ ಯಾವೆಲ್ಲಾ ರಣತಂತ್ರ ರೂಪಿಸಬೇಕು; ಸದನದಲ್ಲಿ ಆಡಳಿತ ಪಕ್ಷಗಳ ಕಾನೂನಾತ್ಮಕ ಮಾತುಗಳಿಗೆ ಯಾವ ಉತ್ತರ ಕೊಡಬೇಕು ಇತ್ಯಾದಿ ವಿಚಾರಗಳನ್ನು ಇವತ್ತಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ನಾಳೆ ಮೈತ್ರಿಪಕ್ಷಗಳು ಸಲ್ಲಿಸಿರುವ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಿದೆ. ಅದು ಬಿಜೆಪಿಯ ಮುಂದನ ನಡೆಯ ಮೇಲೆ ಪ್ರಭಾವ ಬೀರಲಿದೆ.
ಇನ್ನು, ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನಕ್ಕೆ ಕೂರಿಸಿ ಆ ಮೂಲಕ ಅತೃಪ್ತರನ್ನು ಓಲೈಸುವ ಕೆಲಸವನ್ನು ಜೆಡಿಎಸ್ ಪಕ್ಷ ಮಾಡುತ್ತಿರುವುದು ಬಿಜೆಪಿಯನ್ನು ಅಧೀರಗೊಳಿಸಿದಂತಿಲ್ಲ. ಮೈತ್ರಿಪಾಳಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಅತೃಪ್ತರು ಸದನಕ್ಕೆ ಬರೋದಿಲ್ಲ. ಸರ್ಕಾರ ಏನೇ ತಂತ್ರ ಉಪಯೋಗಿಸಿದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸಾಧ್ಯವಿಲ್ಲ ಎಂಬ ವಿಶ್ವಾಸದಲ್ಲಿ ಕಮಲ ಪಾಳಯ ಇದೆ.
ಇದೇ ವೇಳೆ, ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿಗಳೂ ವೈರಲ್ ಆಗಿ ಹಬ್ಬಿವೆ. ಮುಖ್ಯಮಂತ್ರಿಗಳೇ ಸ್ವತಃ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ತಾವು ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಹೆಚ್ಡಿಕೆ ಅವರು ಸೋಮವಾರದ ಅಧಿವೇಶನಕ್ಕೆ ಹಾಜರಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
Comments are closed.