ಕರ್ನಾಟಕ

ಗುರುವಾರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ !

Pinterest LinkedIn Tumblr

ಬೆಂಗಳೂರು: ತಾಳ್ಮೆ, ದೃಢ ನಿರ್ಧಾರದಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ, ಬಿ.ಎಸ್ ಯಡಿಯೂರಪ್ಪ ಅವರು ತಮ್ಮ 7ನೇ ಪ್ರಯತ್ನದಲ್ಲಿ ಸಮ್ಮಿಶ್ರ ಸರ್ಕಾರವನ್ನು ಪತನ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 15 ತಿಂಗಳಲ್ಲಿ ಲಿಂಗಾಯತ ಪ್ರಬಲ ನಾಯಕನಾಗಿರುವ ಯಡಿಯೂರಪ್ಪ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಮೊದಲು ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದು, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಬಳಿಕವಷ್ಟೇ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಸಭೆಯಲ್ಲಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಪಕ್ಷೇತರ ಶಾಸಕರಿಬ್ಬರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸ ಗೊತ್ತುವಳಿ ಬಗ್ಗೆ ನಾಲ್ಕು ದಿನಗಳ ಕಾಲ ಸುದೀರ್ಘ ಚರ್ಚೆ ನಡೆದ ಬಳಿಕ ನಿನ್ನೆ ಸಂಜೆ ಸ್ಪೀಕರ್ ರಮೇಶ್ ಕುಮಾರ್ ಮತಕ್ಕೆ ಹಾಕಿದಾಗ ಅದು ಬಿದ್ದು ಹೋಗಿದೆ. ಇದರೊಂದಿಗೆ ಸರ್ಕಾರ ಪತನಗೊಂಡಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಅವರು ಉಸ್ತುವಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿದ್ದಾರೆ.

ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಎರಡು ದಿನಗಳ ಕಾಲ 144 ಸೆಕ್ಷನ್‌ನಡಿ ನಿಷೇಧಾಜ್ಞೆ ವಿಧಿಸಲಾಗಿದೆ.

ಬುಧವಾರ ಪಕ್ಷೇತರ ಶಾಸಕರ ಪರ ಸುಪ್ರೀಂಕೋರ್ಟ್ ತೀರ್ಪು ನೀಡಲಿದ್ದು, ಅದಾದ ನಂತರ ಬಿಎಸ್ ವೈ ಗೆ ಸ್ವಲ್ಪ ನಿರಾಳವಾಗಲಿದೆ. ಕಾಂಗ್ರೆಸ್ -ಜೆಡಿಎಸ್ ನಾಯಕರು ರಿವರ್ಸ್ ಆಪರೇಷನ್ ಮಾಡಬಹುದೆಂಬ ಭಯದಿಂದ ಯಡಿಯೂರಪ್ಪ ಮುಕ್ತರಾಗಿದ್ದಾರೆ.

ಇನ್ನೂ ಸಂಪುಟಕ್ಕೆ ಸಚಿವರನ್ನು ಹಿರಿತನ, ಜಾತಿ ಸಮೀಕರಣದ ಮೇಲೆ ಆಯ್ಕೆ ಮಾಡಿ ಹೈಕಮಾಂಡ್ ಸೂಚನೆಯಂತೆ ಸಚಿವ ಸ್ಥಾನ ನೀಡಲಾಗುವುದು. ಮಂಗಳವಾರ ವಿಧಾನಸಭೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ವಿಶ್ವಾಸ ಮತ ದಲ್ಲಿ ಸೋಲು ಅನುಭವಿಸಿದ ನಂತರ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.

ಇಂದು ಯಡಿಯೂರಪ್ಪ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ, ಇದೇ ವೇಳೆ ಕಾಂಗ್ರೆಸ್ ಬಂಡಾಯ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಹೇಳಿದ್ದಾರೆ.

Comments are closed.