ಬೆಂಗಳೂರು: ಇಂದು ಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಸೋಮವಾರ ವಿಶ್ವಾಸಮತ ಯಾಚನೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಿದರು. ಬಿಎಸ್ ವೈ ಅವರಿಗೆ ಕರೆ ಮಾಡಿದ್ದ ಅಮಿತ್ ಶಾ ಅವರು, ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ದಿಢೀರನೆ ರಾಜಭವನಕ್ಕೆ ತೆರಳಿದ ಬಿಎಸ್ ವೈ ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿದ್ದಾರೆ.
ಅಂತೆಯೇ ರಾಜ್ಯಪಾಲರೂ ಕೂಡ ಅನುಮತಿ ನೀಡಿದ್ದು, ಇಂದು ಸಂಜೆಯೇ ಬಿಎಸ್ ವೈ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಕುರಿತಂತೆ ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ‘ಇಂದು ಸಂಜೆ 6 ರಿಂದ 6.15 ರ ವೇಳೆಗೆ ತಾವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ. ಸರ್ಕಾರ ರಚನೆ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ತಾವು ಮಂಡಿಸಿದ ಮನವಿಯನ್ನು ಸಮ್ಮತಿಸಿರುವ ರಾಜ್ಯಪಾಲರು ಸರ್ಕಾರ ರಚಿಸಲು ಸೂಚನೆ ನೀಡಿದ್ದಾರೆ ಎಂದರು.
ಅಂತೆಯೇ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಂಗಾಮಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಸೇರಿದಂತೆ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಆಹ್ವಾನ ನೀಡುವುದಾಗಿ ಯಡಿಯೂರಪ್ಪ ತಿಳಿಸಿದರು.
ಇನ್ನುನೂತನ ರಾಜ್ಯ ಸಚಿವ ಸಂಪುಟದಲ್ಲಿ ಯಾರು ಯಾರು ಇರಲಿದ್ದಾರೆ ಎಂಬುದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ ನಂತರ ಆಖೈರುಗೊಳಿಸುವುದಾಗಿ ನಿಯೋಜಿತ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
Comments are closed.