ಬೆಂಗಳೂರು(ಜುಲೈ.27): ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂಬ ವದಂತಿಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. “ಬಿಜೆಪಿ ಜೊತೆಗೆ ಸಂಬಂಧ ಬೆಸೆಯುವ ಆಧಾರ ರಹಿತ ಸುದ್ದಿಗಳನ್ನು ಗಮನಿಸಿದ್ದೇನೆ. ಸತ್ಯಕ್ಕೆ ದೂರವಾದ ಈ ರೀತಿಯ ಊಹಾಪೋಹಗಳಿಗೆ ನಮ್ಮ ಶಾಸಕರು ಹಾಗೂ ಕಾರ್ಯಕರ್ತರು ಕಿವಿಗೊಡಬೇಕಾಗಿಲ್ಲ. ಜನಸೇವೆಯ ಮೂಲಕ ಪಕ್ಷವನ್ನು ಕಟ್ಟೋಣ. ನಮ್ಮ ಜನಪರ ಹೋರಾಟ ನಿರಂತರ” ಎಂದು ಟ್ವೀಟ್ ಮಾಡುವ ಮೂಲಕ ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತದ ಬಳಿಕ ಅಧಿಕಾರಕ್ಕಾಗಿ ಬಿಜೆಪಿಗೆ ಬೆಂಬಲ ನೀಡುವಂತೆ ಜೆಡಿಎಸ್ ಶಾಸಕರು ಪಕ್ಷದ ವರಿಷ್ಠರಿಗೆ ಒತ್ತಡ ಹೇರಿದ್ದಾರೆ ಎನ್ನಲಾಗಿತ್ತು. ನಿನ್ನೆ ಸಂಜೇ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಪಕ್ಷದ ಶಾಸಕರಿಗಾಗಿ ಆಯೋಜಿಸಿದ್ದ ಭೋಜನಕೂಟದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಈ ಒತ್ತಾಯ ಕೇಳಿ ಬಂದಿತ್ತು ಎಂದು ಹೇಳಲಾಗುತ್ತಿತ್ತು.
ಅಧಿಕಾರ ಕಳೆದುಕೊಂಡಿರುವ ನಮಗೆ ಆಪರೇಷನ್ ಕಮಲ ಭೀತಿ ಎದುರಾಗಿದೆ. ನಮ್ಮ ಪಕ್ಷದ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗುವುದನ್ನು ತಪ್ಪಿಸಲು ನಾವೇ ಬಿಜೆಪಿ ಜೊತೆ ಕೈ ಜೋಡಿಸೋಣ. ಈ ಮೂಲಕ ಪಕ್ಷವನ್ನು ಉಳಿಸಿಕೊಳ್ಳಬಹುದು ಎಂಬ ಸಲಹೆ ಜೆಡಿಎಸ್ ಶಾಸಕರು ನೀಡಿದ್ದರು ಎನ್ನಲಾಗಿತ್ತು.
ಇನ್ನೂ ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಶಾಸಕರಿಗೆ ಭರವಸೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಈ ಬೆನ್ನಲ್ಲೇ ಭಾರತೀಯ ಜನತಾ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುತ್ತೇವೆ ಎಂದಿರುವ ಜೆಡಿಎಸ್ ಮುಖಂಡರಿಗೆ ಧನ್ಯವಾದಗಳು ತಿಳಿಸುತ್ತೇವೆ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದರು. ಇದರಿಂದಾಗಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂಬ ಸುದ್ದಿಗೆ ಮತ್ತಷ್ಟು ಮಹತ್ವ ಸಿಕ್ಕಿತ್ತು. ಇದೀಗ ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡೋಲ್ಲ ಎಂದು ಕಡ್ಡಿ ಮುರಿದಂತೆ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
Comments are closed.