ಕರ್ನಾಟಕ

ಸಂಪುಟ ರಚನೆಗೆ ಅಮಿತ್ ಶಾ ಸೂಚನೆಗೆ ಕಾಯುತ್ತಿರುವ ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ ವಾರ ಕಳೆದರೂ ನೂತನ ಮಂತ್ರಿಮಂಡಲ ರಚನೆಗೆ ಬಿಜೆಪಿ ವರಿಷ್ಠರ ವಲಯದಲ್ಲಿ ಕಸರತ್ತು ನಡೆಯುತ್ತಲೇ ಇದೆ.

ಅನರ್ಹ ಶಾಸಕರನ್ನು ಗಮನದಲ್ಲಿಟ್ಟುಕೊಂಡು ಮಂತ್ರಿಮಂಡಲ ರಚನೆಗೆ ಬೇಕಾದ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಯಾರ್ಯಾರು ಮಂತ್ರಿಯಾಗಲಿದ್ದಾರೆ ಎಂಬುದರ ಸಂಭಾವ್ಯರ ಪಟ್ಟಿಯೂ ಸಿದ್ಧವಾಗಿದೆ. ಆದರೆ, ಕೇಂದ್ರ ನಾಯಕರ ಸಮ್ಮತಿ ಇಲ್ಲದೆ ರಾಜ್ಯನಾಯಕರಿಂದಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಗೌಪ್ಯವಾಗಿ ಮತ್ತು ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ಲೋಕಸಭೆ ಅಧಿವೇಶನ ನಡೆಯುತ್ತಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಗೃಹ ಸಚಿವ ಅಮಿತ್‌ ಶಾ ಸೇರಿ ಬಹುತೇಕ ಕೇಂದ್ರ ನಾಯಕರು ಬಿಡುವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ನಾಯಕರಿಗೆ ಸಂಭಾವ್ಯರ ಪಟ್ಟಿ ತೆಗೆದುಕೊಂಡು ಬರುವಂತೆ ಇನ್ನೂ ಕರೆ ಬಂದಿಲ್ಲ. ಕೇಂದ್ರದಿಂದ ಕರೆ ಬರುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಪ್ರಮುಖ ನಾಯಕರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಕೇಂದ್ರದ ನಾಯಕರ ಒಪ್ಪಿಗೆಯಂತೆ ಸಚಿವ ಸಂಪುಟ ರಚನೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪಕ್ಷ ನಿಷ್ಠೆ ಹಾಗೂ ಪಕ್ಷದ ಭವಿಷ್ಯವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ, ಜಾತಿ ಲೆಕ್ಕಚಾರ, ಪ್ರಾದೇಶಿಕ ಸ್ಥಾನಮಾನ, ಸಾಮಾಜಿಕ ನ್ಯಾಯ ಇತ್ಯಾದಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ರಚನೆಗೆ ಸಿದ್ಧತೆ ಆರಂಭವಾಗಿದೆ. ಲಿಂಗಾಯತ, ಬ್ರಾಹ್ಮಣ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ ಜತೆಗೆ ಅಲ್ಪಸಂಖ್ಯಾತರಿಗೆ ಮಾನ್ಯತೆ ಸೇರಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಬಲ್ಲ ಮಂತ್ರಿಮಂಡಲ ರಚನೆಯಾಗಲಿದೆ. ರಾಜ್ಯದ ನಾಯಕರು ಯಾವುದೇ ಪಟ್ಟಿ ಸಿದ್ಧಪಡಿಸಿದರೂ, ಕೇಂದ್ರ ನಾಯಕರ ಪರಿಕಲ್ಪನೆಯಂತೆಯೇ ಸಚಿವ ಸಂಪುಟ ರಚನೆಯಾಗಲಿದೆ.

ಕರಾವಳಿ ಭಾಗದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್‌, ಎಸ್‌.ಅಂಗಾರ, ವೇದವ್ಯಾಸ ಕಾಮತ್‌, ಸಂಜೀವ ಮಟ್ಟಂದೂರು, ಹರೀಶ್‌ಪೂಂಜಾ ಹಾಗೂ ಕೊಡಗಿನ ಅಪ್ಪಚ್ಚು ರಂಜನ್‌, ಕೆ.ಜಿ.ಬೋಪಯ್ಯ ಮೊದಲಾದವರು ಸಚಿವಾಕಾಂಕ್ಷಿಗಳಾಗಿದ್ದರೂ, ಯಾರಿಗೆಲ್ಲ ಭಾಗ್ಯ ದೊರೆಯಲಿದೆ ಎಂಬುದು ಕೇಂದ್ರ ನಾಯಕರನ್ನು ಅವಲಂಬಿಸಿಕೊಂಡಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ರೆಬಲ್ ಆಗಿ, ಅನರ್ಹತೆಯ ಪಟ್ಟ ಕಟ್ಟಿಕೊಂಡಿರುವ 17 ಶಾಸಕರನ್ನು ಗಮನದಲ್ಲಿ ಇಟ್ಟುಕೊಂಡು, ಶಾಸಕರಾದ ಆರ್‌. ಅಶೋಕ್‌, ಡಾ.ಅಶ್ವತ್ಥ್ ನಾರಾಯಣ, ಅರವಿಂದ ಲಿಂಬಾವಳಿ, ಸುರೇಶ್‌ ಕುಮಾರ್‌, ಕೆ.ಎಸ್‌.ಈಶ್ವರಪ್ಪ, ಶ್ರಿರಾಮುಲು, ಸಿ.ಟಿ.ರವಿ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಉಮೇಶ್‌ ಕತ್ತಿ, ಸಿ.ಎಂ.ಉದಾಸಿ, ಬಾಲಚಂದ್ರ ಜಾರಕಿಹೋಳಿ, ಎಸ್‌.ಎ.ರಾಮದಾಸ್‌, ರೇಣುಕಾಚಾರ್ಯ, ಸಿ.ಸಿ.ಪಾಟೀಲ್ ಸೇರಿ ಅನೇಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಇದರ ಜತೆಗೆ ವಿಧಾನ ಪರಿಷತ್‌ನಲ್ಲಿ ಒಬ್ಬರಿಗೆ ಅಥವಾ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕಾಗುತ್ತದೆ. ವಾರದೊಳಗೆ ಸಚಿವ ಸಂಪುಟ ರಚನೆಯ ಕಾರ್ಯ ಪೂರ್ಣಗೊಂಡು ಪ್ರಮಾಣವಚನ ಸ್ವೀಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯ ಭದ್ರಕೋಟೆಯಾಗಿರುವ ಕರಾವಳಿ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿ ಪಕ್ಷದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಮತ್ತು ಹೈದರಬಾದ್‌ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಯನ್ನು ಬಲಗೊಳಿಸಲು ಬೇಕಾದ ರೀತಿಯಲ್ಲಿ ಸಚಿವ ಸಂಪುಟ ರಚನೆಯಾಗಲಿದೆ. ಅಲ್ಲದೆ, ಹಿರಿತನ ಹಾಗೂ ಭವಿಷ್ಯದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಳ್ಳಬಲ್ಲ ಯುವನಾಯಕರನ್ನು ಪರಿಗಣಿಸಿಕೊಂಡು ಸಮಗ್ರತೆಯ ಸಚಿವ ಸಂಪುಟ ರಚನೆಗೆ ಬೇಕಾದ ಕಸರತ್ತು ಆರಂಭವಾಗಿದೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಕುರಿತೂ ಚರ್ಚೆ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವುದರಿಂದ ರಾಜ್ಯಾಧ್ಯಕ್ಷ ಸ್ಥಾನ ಬೇರೆ ಯಾರಿಗಾದರೂ ನೀಡುವ ಸಾಧ್ಯತೆಯಿದೆ. ಅಲ್ಲದೆ, ಅವಧಿ ಕೂಡ ಈಗಾಗಲೇ ಮುಗಿದಿದೆ. ಹೀಗಾಗಿ ಸಂಸದ ನಳೀನ್‌ ಕುಮಾರ್‌ ಕಟೀಲು, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್‌, ಸಿ.ಟಿ.ರವಿ, ಗೋವಿಂದ ಕಾರಜೋಳ ಸೇರಿ ಅನೇಕ ನಾಯಕರ ಹೆಸರುಗಳು ಕೇಳಿ ಬರುತ್ತಿದೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ಕೇಂದ್ರ ನಾಯಕರು ಯಾರ ಮೇಲೆ ಈ ಜವಾಬ್ದಾರಿ ವಹಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಇಲ್ಲಿಯೂ ಜಾತಿ ಲೆಕ್ಕಾಚಾರಗಳು ನಡೆಯುತ್ತಿವೆ

Comments are closed.