ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ, ಘಟಪ್ರಭಾ, ಮಲಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ 14 ವರ್ಷಗಳ ಹಿಂದಿನ ಪ್ರವಾಹ ಮರುಕಳಿಸುವ ಭೀತಿ ಎದುರಾಗಿದೆ. ಹೀಗಾಗಿ, ನದಿ ಪಾತ್ರದ 37 ಗ್ರಾಮಗಳು ಜಲಾವೃತವಾಗುವ ಆತಂಕ ಎದುರಿಸುತ್ತಿದ್ದು, ರಾಯಬಾಗ ತಾಲೂಕಿನ ಮೂರು, ಚಿಕ್ಕೋಡಿ ತಾಲೂಕಿನ ಒಂದು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. 15 ಸೇತುವೆಗಳು ಮುಳುಗಡೆಯಾಗಿವೆ.
ಕೃಷ್ಣಾ ನದಿಯ ಉಗಮಸ್ಥಾನ ಮಹಾಬಳೇಶ್ವರ, ವಾರಣಾ, ನವಜಾ, ರಾಧಾನಗರಿ ಮತ್ತು ಪಾಟಗಾಂವ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ದೂಧಗಂಗಾ ನದಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ 29 ಸಾವಿರ ಕ್ಯೂಸೆಕ್‌ನಿಂದ ಶುಕ್ರವಾರ 33 ಸಾವಿರ ಕ್ಯೂಸೆಕ್ ದಾಟಿದೆ. ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ಇದ್ದ ನೀರಿನ ಒಳ ಹರಿವು 1.65 ಲಕ್ಷ ಕ್ಯೂಸೆಕ್ ಮುಟ್ಟಿದೆ. ಹೀಗಾಗಿ ಶುಕ್ರವಾರ ನದಿ ನೀರಿನ ಮಟ್ಟ ಎರಡು ಅಡಿ ಹೆಚ್ಚಾಗಿ ಅಪಾಯದ ಮಟ್ಟ ಮೀರಿದೆ.
10 ಸೇತುವೆ ಜಲಾವೃತ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಉಗಾರ, ರಾಯಬಾಗ ತಾಲೂಕಿನ ಜಮಖಂಡಿ-ಮಿರಜ ರಸ್ತೆಯ ಕುಡಚಿ, ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, ಸದಲಗಾ- ಬೋರಗಾಂವ, ಮಲಿಕವಾಡ-ದತ್ತವಾಡ, ಕಾರದಗಾ- ಭೋಜ, ಯಕ್ಸಂಬಾ-ಧಾನವಾಡ, ಬೋಜವಾಡಿ- ಕುನ್ನೂರ, ಜತ್ರಾಟ-ಭೀವಸಿ, ಸಿದ್ನಾಳ-ಅಕ್ಕೋಳ ಸೇತುವೆ ಸೇರಿದಂತೆ ಚಿಕ್ಕೋಡಿ ಉಪವಿಭಾಗದಲ್ಲಿ ಹತ್ತು ಸೇತುವೆಗಳು ಮುಳುಗಡೆಯಾಗಿವೆ. ಇಂಗಳಿ ಗ್ರಾಮದ ಮಳಿ ಭಾಗದಲ್ಲಿ ವಾಸ ಮಾಡುವ ಕೆಲ ಕುಟುಂಬಗಳನ್ನು ತಾಲೂಕಾಡಳಿತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ನಡುಗಡ್ಡೆಯಾದ ಗ್ರಾಮಗಳು: ರಾಯಬಾಗ ತಾಲೂಕಿನ ಬಾವನಸೌಂದತ್ತಿ, ಚಿಂಚಲಿ, ಕುಡಚಿ, ಶಿರಗೂರ, ಗುಂಡವಾಡ ಗ್ರಾಮಗಳು ಕೃಷ್ಣಾ ನದಿ ಸುತ್ತುವರಿದ ಹಿನ್ನೆಲೆಯಲ್ಲಿ ನಡುಗಡ್ಡೆಯಾಗಿವೆ. ರಕ್ಷಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಆಗಮಿಸಿದ್ದು, ಶಿರಗೂರ ಮತ್ತು ಗುಂಡವಾಡ ಗ್ರಾಮಗಳಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗುತ್ತಿದೆ.
ಬಾಗಲಕೋಟೆಯಲ್ಲೂ ಪ್ರವಾಹ: “ಕೃಷ್ಣಾಘಾತ’ ಬಾಗಲಕೋಟೆ ಜಿಲ್ಲೆಗೂ ವ್ಯಾಪಿಸಿದ್ದು ರಬಕವಿ-ಬನಹಟ್ಟಿ ತಾಲೂಕಿನ ಡವಳೇಶ್ವರ, ನಂದಗಾವ; ಮುಧೋಳ ತಾಲೂಕಿನ ಮಿರ್ಜಿ, ಚನ್ನಾಳ, ಜಾಲಿಬೇರಿ ಸೇತುವೆಗಳು ಮುಳುಗಡೆಯಾಗಿವೆ. ಹಿರಣ್ಯಕೇಶಿ ನದಿಯಿಂದ ಧುಪದಾಳ ಜಲಾಶಯ ಮಾರ್ಗವಾಗಿ 19 ಸಾವಿರ ಕ್ಯೂಸೆಕ್ ಮತ್ತು ಹಿಡಕಲ್ ಜಲಾಶಯದಿಂದ ಬಿಟ್ಟ ಎರಡು ಸಾವಿರ ಕ್ಯೂಸೆಕ್ ನೀರು ಸೇರಿ ಘಟಪ್ರಭಾ ಉಕ್ಕಿ ಹರಿಯುತ್ತಿದೆ. ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹ ಭೀತಿಯುಂಟು ಮಾಡಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನತೆಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಕೊಯ್ನಾ ಡ್ಯಾಂ ಬಳಿ ಭೂಕಂಪನ: ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟು ಸಮೀಪ ಭೂಕಂಪನವಾಗಿರುವುದು ಕೃಷ್ಣಾ ನದಿ ತೀರದ ಜನರಲ್ಲಿ ಆತಂಕ ಸೃಷ್ಟಿಸಿದೆ. ಕೊಯ್ನಾ ಜಲಾಶಯದಿಂದ 20 ಕಿ.ಮೀ.ಅಂತರದಲ್ಲಿ ಸುಮಾರು 3.9ರಷ್ಟು ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಇದರಿಂದ ಜಲಾಶಯಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರೂ, ತೀರ ಪ್ರದೇಶದ ಜನರು ಆತಂಕಿತರಾಗಿದ್ದಾರೆ. 100 ಟಿಎಂಸಿ ಅಡಿ ಸಾಮರ್ಥ್ಯದ ಕೊಯ್ನಾ ಜಲಾಶಯದಲ್ಲಿ ಈಗ 82 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೆ, 34 ಟಿಎಂಸಿ ಅಡಿ ಸಾಮರ್ಥ್ಯದ ವಾರಣಾ ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
2005ರಲ್ಲಿ ಏನಾಗಿತ್ತು?: ಈ ಹಿಂದೆ, 2005ರಲ್ಲಿ ಮಹಾರಾಷ್ಟ್ರ ಹಾಗೂ ರಾಜ್ಯದ ಅಧಿಕಾರಿಗಳ ಸಂವಹನ ಕೊರತೆಯಿಂದ ಕೊಯ್ನಾ, ವಾರಣಾ ಸೇರಿದಂತೆ ಇತರ ಜಲಾಶಯಗಳಿಂದ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ ಏಕಾಏಕಿ ಐದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬಂದಿತ್ತು. ಒಮ್ಮೆಲೇ ಇಷ್ಟು ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ನದಿ ತೀರದ 35ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿದ್ದವು.
ಆಗ ಉಕ್ಕಿ ಹರಿದ ಕೃಷ್ಣಾ ನದಿಯು ತೀರ ಪ್ರದೇಶದ ಸಾವಿರಾರು ಜನರ ಬದುಕನ್ನೇ ಮೂರಾಬಟ್ಟೆ ಮಾಡಿತ್ತು. ನೂರಾರು ಜಾನುವಾರುಗಳು ನೀರಿನಲ್ಲಿ ತೇಲಿಕೊಂಡು ಹೋಗಿದ್ದವು. ಹಲವಾರು ಜನ ಪ್ರವಾಹಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು. ಈಗ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ, ರಾಜಾಪುರ ಬ್ಯಾರೇಜ್ ಹಾಗೂ ಪಂಚಗಂಗಾ ನದಿಯಿಂದ ಬರುತ್ತಿರುವ ನೀರು ಕರಾಳ ಪ್ರವಾಹದ ನೆನಪು ಮಾಡುತ್ತಿದೆ.
Comments are closed.