ಕರ್ನಾಟಕ

ಮುನಿರತ್ನ ವಿರುದ್ಧ ರಮೇಶ್ ಜಾರಕಿಹೊಳಿ ಕೆಂಗಣ್ಣು

Pinterest LinkedIn Tumblr


ಬೆಂಗಳೂರು(ಆ. 02): ಅನರ್ಹ ಶಾಸಕ ಮುನಿರತ್ನ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಬೆಳವಣಿಗೆ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಭಿನ್ನಮತೀಯರೊಳಗೆಯೇ ಭಿನ್ನಮತ ಎದ್ದಿದೆಯಾ ಎನ್ನುವ ಸಂದೇಹ ಕೂಡ ಎದ್ದಿತ್ತು. ಎಂಥದ್ದೇ ಪರಿಸ್ಥಿತಿಯಲ್ಲೂ ಹಲವು ದಿನಗಳ ಕಾಲ ಒಗ್ಗಟ್ಟು ಕಾಯ್ದುಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅತೃಪ್ತರ ಗುಂಪಿನಲ್ಲಿ ಬಿರುಕು ಮೂಡಿತೆಂದೇ ಭಾವಿಸಲಾಗುತ್ತಿದೆ. ಆಪರೇಷನ್ ಕಮಲದ ಮುಖ್ಯ ಪಾತ್ರಧಾರಿಯಾಗಿ ಎಲ್ಲರನ್ನೂ ಹಿಡಿದಿಟ್ಟುಕೊಳ್ಳಲು ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಮುನಿರತ್ನ ಅವರ ವರ್ತನೆ ಇರಿಸುಮುರುಸು ತಂದಿದೆ ಎನ್ನಲಾಗಿದೆ.

ಮುನಿರತ್ನ ಯಾರಿಗೂ ತಿಳಿಸದೇ ಏಕಾಏಕಿ ಮಾಧ್ಯಮಗಳ ಮುಂದೆ ಹೋಗಿದ್ದು ಮತ್ತು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ರಮೇಶ್ ಜಾರಕಿಹೊಳಿ ಅವರ ಕಣ್ಣನ್ನು ಕೆಂಪಗಾಗಿಸಿದೆ. ಶಾಸಕರ ಅನರ್ಹತೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಯಾರೂ ಕೂಡ ಬಹಿರಂಗ ಹೇಳಿಕೆ ಕೊಡಬಾರದು ಎಂದು ಎಲ್ಲಾ ಅತೃಪ್ತರೂ ತೀರ್ಮಾನಕ್ಕೆ ಬಂದಿದ್ದರಂತೆ. ಅಷ್ಟಿದ್ದರೂ ಮುನಿರತ್ನ ಮಾಧ್ಯಮಗಳ ಮುಂದೆ ಮಾತನಾಡಿದ್ದು ಸರಿಯಲ್ಲ ಎಂದು ರಮೇಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆನಲಾಗಿದೆ.

ಮುನಿರತ್ನ ಡಿಕೆಶಿಯನ್ನು ಭೇಟಿ ಮಾಡಿದ್ದು ಗೋಕಾಕ್ ಸಾಹುಕಾರ್​ಗೆ ಎಲ್ಲಿಲ್ಲದ ಕೋಪ ತರಿಸಿದೆ. ಸ್ಪೀಕರ್ ಮೇಲೆ ಒತ್ತಡ ಹೇರಿ ತಮ್ಮನ್ನು ಅನರ್ಹ ಮಾಡಿಸಿದ್ದಾರೆ. ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ಧೇಕೆ ಎಂದು ರಮೇಶ್ ಜಾರಕಿಹೊಳಿ ಕೇಳಿದ್ದಾರೆ.

ಎಲ್ಲಾ ಅನರ್ಹ ಶಾಸಕರಿಗೂ ದೂರವಾಣಿ ಕರೆ ಮಾಡಿ ಮಾತನಾಡಿರುವ ರಮೇಶ್ ಜಾರಕಿಹೊಳಿ, ಸುಪ್ರೀಂ ಕೋರ್ಟ್​ನ ತೀರ್ಪು ಬಂದ ಬಳಿಕ ಒಟ್ಟಿಗೆ ಸೇರಿ ಸುದ್ದಿಗೋಷ್ಠಿ ಮಾಡೋಣ. ಅಲ್ಲಿಯವರೆಗೂ ಯಾರೂ ಕೂಡ ಮಾಧ್ಯಮಗಳ ಮುಂದೆ ಹೋಗೋದು ಬೇಡ ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆನ್ನಲಾಗಿದೆ.

ಪಕ್ಷಾಂತರ ನಿಷೇಧ ಕಾಯ್ದೆ ಬಳಸಿ ಕಾಂಗ್ರೆಸ್​ನ 14 ಮತ್ತು ಜೆಡಿಎಸ್​ನ 3 ಸೇರಿದಂತೆ 17 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದರು. ಹಾಗೆಯೇ ಇವರನ್ನು ಆಯಾ ಪಕ್ಷಗಳಿಂದ ಉಚ್ಛಾಟನೆ ಕೂಡ ಮಾಡಲಾಗಿದೆ. ಸ್ಪೀಕರ್ ಆದೇಶ ಪ್ರಶ್ನಿಸಿ ಈ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ಧಾರೆ. ಸ್ಪೀಕರ್ ಕ್ರಮ ಸಿಂಧುವಿದೆಯಾ ಮತ್ತು ಅನರ್ಹಗೊಂಡ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದಾ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ತೀರ್ಪು ಉತ್ತರ ನೀಡುವ ಸಾಧ್ಯತೆ ಇದೆ.

Comments are closed.