ಕರ್ನಾಟಕ

ಸಿದ್ಧಾರ್ಥ್​​ ಸಾವು; ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಏನಿದೆ?

Pinterest LinkedIn Tumblr


ಬೆಂಗಳೂರು(ಆಗಸ್ಟ್​​.02): ಕೆಫೆ ಕಾಫಿ ಡೇ ಕಿಂಗ್​​ ಸಿದ್ಧಾರ್ಥರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭ್ಯವಾಗಿದೆ. ಈ ಪ್ರಥಾಮಿಕ ವರದಿಯಲ್ಲಿ ಸಿದ್ಧಾರ್ಥರ ಸಾವಿಗೆ ಕಾರಣ ಏನಿರಬಹುದು? ಎಂಬುದರ ಸುಳಿವು ಸಿಕ್ಕಿದೆ. ಇವರ ದೇಹದ ಯಾವ ಭಾಗಕ್ಕೆ ಏಟಾಗಿತ್ತು ಎಂಬ ಮಾಹಿತಿ ದೊರಕಿದೆ. ಆದರೆ, ಅಂತಿಮ ವರದಿ ಬಂದ್ಮೇಲೆ ಮಾತ್ರವೇ ಸಾವಿಗೆ ನಿಜವಾದ ಕಾರಣ ಎಂದು ಗೊತ್ತಾಗಲಿದೆ ಎನ್ನುತ್ತಿವೆ ಆಸ್ಪತ್ರೆಯ ಮೂಲಗಳು.

ಮಂಗಳೂರು ದಕ್ಷಿಣ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ಸಿಸಿಬಿ ಪೊಲೀಸ್ ತಂಡ ಮತ್ತೊಮ್ಮೆ ಬೆಂಗಳೂರಿಗೆ ಆಗಮಿಸಿ ಅಲ್ಲಿಯೂ ತನಿಖೆ ನಡೆಸಲಿದೆ. ಸಿದ್ಧಾರ್ಥ ದೇಹದ ಮರಣೋತ್ತರ ಪರೀಕ್ಷೆಯನ್ನು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಫೋರೆನ್ಸಿಕ್ ತಜ್ಞರಿಬ್ಬರು ಪೋಸ್ಟ್ ಮಾರ್ಟಂ ನಡೆಸಿದ್ದರು. ಇದರ ವರದಿಯನ್ನು 30 ದಿನಗಳೊಳಗೆ ಆಸ್ಪತ್ರೆಯ ಅಧೀಕ್ಷಕರಿಗೆ ಸಲ್ಲಿಸಲಾಗುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸಿದ್ಧಾರ್ಥ್ ಸಾವಿನ ಪ್ರಕರಣವನ್ನು ನಾಲ್ಕು ದಿನಗಳಲ್ಲಿ ಪೂರ್ಣಗೊಳಿಸುವಂತೆ ತನಿಖಾ ತಂಡಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ಬೆಂಗಳೂರಿನ ಪೊಲೀಸ್​ ತಂಡವೊಂದು, ಸಿದ್ಧಾರ್ಥ ಮಾಲೀಕತ್ವದ ಸಂಸ್ಥೆಗಳ ಬಗ್ಗೆಯೂ ತನಿಖೆ ನಡೆಸಿತ್ತು. ಅಲ್ಲದೇ ಸಿದ್ಧಾರ್ಥರ ಕಾರು ಚಾಲಕನನ್ನು ವಿಚಾರಣೆ ಮಾಡಿತ್ತು.

ಇನ್ನು ಬ್ರಹ್ಮರಕೂಟ್ಲು ಟೋಲ್​​ ಗೇಟ್‌ನಿಂದ ಹಿಡಿದು ನೇತ್ರಾವತಿ ಸೇತುವೆಯಿಂದ ನಾಪತ್ತೆಯಾದವರೆಗೂ ಎಲ್ಲ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಲಾಗಿದೆ. ಸಿದ್ಧಾರ್ಥ ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆಯೂ ತನಿಖೆ ಮಾಡಲಾಗಿದೆ. ಈಗಷ್ಟೇ ಪತ್ರವನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದ್ದು, ಶೀಘ್ರದಲ್ಲೇ ಐಟಿ ಅಧಿಕಾರಿಗಳಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ.

Comments are closed.