ಕರ್ನಾಟಕ

ಭಯಬೇಡ, ನಿಮ್ಮೊಂದಿಗೆ ನಾನಿದ್ದೇನೆ: ಬಿಎಸ್ ವೈ

Pinterest LinkedIn Tumblr


ಹುಬ್ಬಳ್ಳಿ: “ಹೆದರಬೇಡಿ, ನಿಮ್ಮೊಂದಿಗೆ ನಾನಿದ್ದೇನೆ. ತುರ್ತುಕ್ರಮ ಕೈಗೊಳ್ಳಲು ಹಣಕಾಸಿನ ಯಾವುದೇ ತೊಂದರೆ ಇಲ್ಲ’ ಎಂದು ಪ್ರವಾಹ ಪೀಡಿತ ಜನತೆಗೆ ಸಿಎಂ ಯಡಿಯೂರಪ್ಪ ಅಭಯ ನೀಡಿದ್ದಾರೆ. ಸೋಮವಾರ ಉತ್ತರ ಕರ್ನಾಟಕದ ಪ್ರವಾಹದ ಅಬ್ಬರಕ್ಕೆ ತತ್ತರಿಸಿರುವ ರಾಯಚೂರು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಹೆಲಿಕಾಪ್ಟರ್‌ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ವಿಜಯಪುರ ಹಾಗೂ ರಾಯಚೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಪುನರ್ವಸತಿ, ಸ್ಥಳಾಂತರ ಹಾಗೂ ಹಾನಿ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ತುರ್ತು ಕ್ರಮಕ್ಕೆ ಬೇಕಾದ ಅಗತ್ಯ ಅನುದಾನ ಬಳಕೆಗೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗ್ಗೆ ಬಳ್ಳಾರಿಯ ತೋರಣಗಲ್ಲ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ರಾಯಚೂರು, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಹವಾಮಾನ ವೈಪರೀತ್ಯದಿಂದ ಬೆಳಗಾವಿ ಜಿಲ್ಲೆಯ ಸಮೀಕ್ಷೆ ಕೊನೇ ಕ್ಷಣದಲ್ಲಿ ರದ್ದುಗೊಳಿಸಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಕೃಷ್ಣಾ ನದಿಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಯುದೊàಪಾದಿಯಲ್ಲಿ ಕೆಲಸ ಮಾಡಬೇಕು. ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವಲ್ಲಿ ಇನ್ನೂ ಹೆಚ್ಚಿನ ಚುರುಕುತನ ತೋರಬೇಕು.

ರಾಯಚೂರು, ಯಾದಗಿರಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಕುರಿತು ನಾರಾಯಣಪುರ ಬಸವಸಾಗರ, ಆಲಮಟ್ಟಿಯ ಜಲಾಶಯ ಭಾಗದಲ್ಲಿ ವೈಮಾನಿಕ ಪ್ರದೇಶಗಳ ಸಮೀಕ್ಷೆ ನಡೆಸಿದ್ದೇನೆ. ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಮನ್ವಯದಿಂದ ಒಗ್ಗೂಡಿ ಕೆಲಸ ಮಾಡಬೇಕು ಎಂದರು. ದೆಹಲಿಗೆ ತೆರಳಿ ಸೂಕ್ತ ಪರಿಹಾರ ನೀಡುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ. ರಾಯಚೂರು ತಾಲೂಕಿನಲ್ಲಿ 230 ಹೆಕ್ಟೇರ್‌, ಲಿಂಗಸಗೂರು ತಾಲೂಕಿನಲ್ಲಿ 96.8 ಹೆಕ್ಟೇರ್‌ ಮತ್ತು ದೇವದುರ್ಗ ತಾಲೂಕಿನಲ್ಲಿ 36 ಹೆಕ್ಟೇರ್‌ ಬೆಳೆಗಳಿಗೆ ನೀರು ನುಗ್ಗಿದ್ದು, ಒಟ್ಟಾರೆ 368.8 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಒಟ್ಟು 51 ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ ಎಂದರು.

ಪ್ರತಿ ಜಿಲ್ಲಾ ಧಿಕಾರಿ ಬಳಿ ತಲಾ 20 ಕೋಟಿ: ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿರುವ ಪ್ರವಾಹ ಸಂದರ್ಭದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಪ್ರತಿ ಜಿಲ್ಲಾ ಧಿಕಾರಿ ಬಳಿ ತಲಾ 20 ಕೋಟಿ ರೂ. ಲಭ್ಯವಿದೆ. ಹೆಚ್ಚಿನ ಅನುದಾನದ ಅಗತ್ಯ ಎನಿಸಿದಲ್ಲಿ ತಕ್ಷಣ ನೀಡಲು ಸರ್ಕಾರ ಸಿದ್ಧವಿದೆ ಎಂದು ಯಡಿಯೂರಪ್ಪ ಸೂಚಿಸಿದರು.

Comments are closed.