ಕರ್ನಾಟಕ

ಕೆ.ಎಸ್. ಭಗವಾನ್ ನಾಸ್ತಿಕರೇ ಅಥವಾ ಮೋದಿ ಭಕ್ತರೇ?

Pinterest LinkedIn Tumblr


ಬೆಂಗಳೂರು (ಆಗಸ್ಟ್.08); ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರು ವಿಚಾರ ಎಂದರೆ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಕಲಂ 370 ರದ್ದು ಮಾಡುವ ಕೇಂದ್ರದ ನಿರ್ಣಯ. ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ನಿರಂತರವಾಗಿ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಇದೀಗ ಈ ವಿಚಾರಕ್ಕಿಂತ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ ವಿಚಾರವಾದಿ ಹಾಗೂ ಸಾಹಿತಿ ಪ್ರೊ. ಭಗವಾನ್ ಅವರ ಆ ಒಂದು ಪತ್ರ.

ಮಂಗಳವಾರ ಲೋಕಸಭೆ ಕಲಾಪದಲ್ಲಿ ಕಲಂ 370 ರದ್ದು ಮಾಡುವ ಕೇಂದ್ರ ಸರ್ಕಾರದ ವಿಧೇಯಕದ ಕುರಿತು ಚರ್ಚೆ ನಡೆಯುತ್ತಿದ್ದರೆ, ಅದೇ ಸಮಯದಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಪ್ರೊ. ಕೆ.ಎಸ್. ಭಗವಾನ್ ಸ್ವತಃ ತಮ್ಮ ಹಸ್ತಾಕ್ಷರದಲ್ಲಿ ಬರೆದಿದ್ದ ಆ ಒಂದು ಪತ್ರ ಇಡೀ ರಾಜ್ಯದಾದ್ಯಂತ ಕೋಲಾಹಲವನ್ನೇ ಸೃಷ್ಟಿಮಾಡಿತ್ತು.

ಕಳೆದ ನಾಲ್ಕು ದಶಕಗಳಿಂದ ಹಿಂದೂ ಸಂಪ್ರದಾಯದ ಮೂಢನಂಬಿಕೆಗಳು ಹಾಗೂ ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಾಗಿದ್ದ ಭಗವಾನ್ ಕಲಂ 370 ರದ್ದು ಮಾಡುವ ಕೇಂದ್ರದ ನಿರ್ಧಾರವನ್ನು ಬೆಂಬಲಿಸಿ ಪತ್ರವೊಂದನ್ನು ಬರೆದಿದ್ದರು.

ಈ ಪತ್ರದಲ್ಲಿ ಅವರು, “ಸುಮಾರು 72 ವರ್ಷಗಳಿಂದ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರದ ಜನತೆಯಲ್ಲಿ ನಮ್ಮ ನೆಚ್ಚಿನ ಪ್ರಧಾನಮಂತ್ರಿಯವರು ಆರ್ಟಿಕಲ್ 370 ಅನ್ನು ರದ್ದು ಮಾಡುವ ಮೂಲಕ ರಾಷ್ಟ್ರವನ್ನು ಸಂತಸಪಡಿಸಿದ್ದಾರೆ. ಪ್ರತಿದಿನ ಏನಿಲ್ಲ ಅಂದರು 7-8 ಕೋಟಿ ರೂಪಾಯಿಗಳು ವ್ಯರ್ಥವಾಗಿ ಖರ್ಚಾಗುತ್ತಿದ್ದವು. ಅದನ್ನು ಇನ್ನುಮುಂದೆ ಜನತೆಯ ಕಲ್ಯಾಣಕ್ಕಾಗಿ ಅಭಿವೃದ್ಧಿಗಾಗಿ ಬಳಸಲು ಅನುಕೂಲವಾಗುತ್ತದೆ.

ಆರ್ಟಿಕಲ್ 370 ಅನ್ನು ರದ್ದು ಮಾಡುವುದರ ಮುಖಾಂತರ ಪ್ರಧಾನಿ ಮೋದಿ ಮತ್ತು ಅವರ ಕೇಂದ್ರ ಸರ್ಕಾರ ಇಡೀ ದೇಶವನ್ನು ಒಂದೇ ಸಂವಿಧಾನದಡಿ ತಂದಿರುವುದು ಬಹಳ ಶ್ಲಾಘನೀಯವಾದ ಕಾರ್ಯ. ಇದಕ್ಕಾಗಿ ಇಡೀ ರಾಷ್ಟ್ರ ತಹತಹಪಡುತ್ತಿತ್ತು. ಸನ್ಮಾನ್ಯ ಮೋದಿ ಅವರು ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುತ್ತಾರೆ ಎನ್ನಲು ಸಂತೋಷ ಮತ್ತು ಹೆಮ್ಮೆ ಆಗುತ್ತದೆ. ಜೈ ನರೇಂದ್ರ ಮೋದಿ!” ಎಂದು ಪ್ರೊ. ಭಗವಾನ್ ಬರೆದಿದ್ದರು.

ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶಂಸಿಸಿ ಪ್ರೊ. ಭಗವಾನ್ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಇದೀಗ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಒಂದೆಡೆ ಮೋದಿ ಅಭಿಮಾನಿಗಳು ಹಾಗೂ ಬಿಜೆಪಿ ಬೆಂಬಲಿಗರು ಈ ಪತ್ರವನ್ನು ಸಾಧ್ಯವಾದಷ್ಟು ಶೇರ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಪ್ರಗತಿಪರ ಚಿಂತಕರ ವಲಯದಲ್ಲಿ ಜಿಜ್ಞಾಸೆಯೊಂದು ಮನೆಮಾಡಿದೆ.

ಪ್ರಗತಿಪರ ಚಿಂತಕರಲ್ಲಿ ಜಿಜ್ಞಾಸೆ ಮೂಡಿಸಿದ ಭಗವಾನ್ ಪತ್ರ:

ಕಲಂ 370 ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರದ ನಿರ್ಣಯವನ್ನು ಬೆಂಬಲಿಸುವುದು ಅಥವಾ ಅದನ್ನು ವಿರೋಧಿಸುವುದು ಅವರವರ ವ್ಯಯಕ್ತಿಕ ಸ್ವಾತಂತ್ರ್ಯ. ಹೀಗಾಗಿ ಭಗವಾನ್ ಅವರ ಪತ್ರದ ಕುರಿತು ಪ್ರಗತಿಪರ ವಲಯದಲ್ಲಿ ಯಾವುದೇ ತಕರಾರಿಲ್ಲ. ಆದರೆ, ಆ ಪತ್ರದಲ್ಲಿ ಬಳಸಲಾಗಿರುವ ಕೆಲವು ಪದಗಳು ಇದೀಗ ಸಾಹಿತಿ ಭಗವಾನ್ ನಾಸ್ತಿಕರೇ ಅಥವಾ ಮೋದಿ ಭಕ್ತರೇ? ಎಂಬ ಜಿಜ್ಞಾಸೆಗೆ ಕಾರಣವಾಗಿದೆ.

ಭಗವಾನ್ ಅವರು ಪತ್ರದಲ್ಲಿ ಕಲಂ 370 ಏಕೆ ಬೇಡ? ಎಂಬುದರ ಕುರಿತು ಉಲ್ಲೇಖ ಮಾಡುವುದಕ್ಕಿಂತ ಮೋದಿಯವರ ಕುರಿತು ಪ್ರಶಂಸೆ ವ್ಯಕ್ತಪಡಿಸಲೆಂದೇ ಅಧಿಕ ಪದಗಳನ್ನು ವ್ಯಯಿಸಿದ್ದಾರೆ. ಅಲ್ಲದೆ ಪತ್ರದ ಕೊನೆಯಲ್ಲಿ ಜೈ ಮೋದಿ ಎಂದು ಬರೆದುಕೊಂಡಿದ್ದಾರೆ. ಇದು ಸಾಮಾನ್ಯವಾಗಿ ಮೋದಿ ಭಕ್ತರ ಮಂತ್ರವಾಗಿದ್ದು, ಇದನ್ನೇ ಪ್ರೊ. ಭಗವಾನ್ ಸಹ ಬಳಸಿರುವುದರಿಂದ ಅವರು ನಾಸ್ತಿಕರೇ ಅಥವಾ ಅವರೂ ಮೋದಿ ಭಕ್ತರೇ ಎಂಬ ಚರ್ಚೆ ಇದೀಗ ಚಿಂತಕರ ವಲಯದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ.

Comments are closed.